ಉತ್ತರಪ್ರದೇಶ | ʼಖಾಲಿಸ್ತಾನಿ ಝಿಂದಾಬಾದ್ ಪೋರ್ಸ್ʼ ನ ಮೂವರು ಪೊಲೀಸ್ ಎನ್ ಕೌಂಟರ್ ಗೆ ಬಲಿ
ಲಕ್ನೋ: ಪಂಜಾಬ್ ನ ಗುರುದಾಸ್ ಪುರದ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ಪ್ರಕರಣದ ಆರೋಪಿಗಳಾದ ʼಖಾಲಿಸ್ತಾನಿ ಝಿಂದಾಬಾದ್ ಫೋರ್ಸ್ʼನ ಮೂವರು ಸದಸ್ಯರನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ ಎಂದು NDTV ವರದಿ ಮಾಡಿದೆ.
ಗುರ್ವಿಂದರ್ ಸಿಂಗ್, ವೀರೇಂದ್ರ ಸಿಂಗ್ ಮತ್ತು ಜಸನ್ ಪ್ರೀತ್ ಸಿಂಗ್ ಹತ್ಯೆಯಾದ ಖಾಲಿಸ್ತಾನಿ ಝಿಂದಾಬಾದ್ ಫೋರ್ಸ್ ನ ಸದಸ್ಯರು. ಈ ಮೂವರು ಅಪರಾಧಿಗಳನ್ನು ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರ ಜಂಟಿ ತಂಡ ಬಂಧಿಸಲು ಯತ್ನಿಸಿದಾಗ ಪೊಲೀಸರ ಮೇಲೆ ಅವರು ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಅವರು ಮೃತಪಟ್ಟಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮೂವರು ಪಾಕಿಸ್ತಾನ ಪ್ರಾಯೋಜಿತ ʼಖಾಲಿಸ್ತಾನಿ ಝಿಂದಾಬಾದ್ ಫೋರ್ಸ್ʼನ ಭಾಗವಾಗಿದ್ದಾರೆ. ಈ ಘಟಕವು ಪಂಜಾಬ್ ಗಡಿ ಪ್ರದೇಶಗಳಲ್ಲಿನ ಪೊಲೀಸ್ ಚೆಕ್ ಪೋಸ್ಟ್ ಗಳ ಮೇಲೆ ಗ್ರೆನೇಡ್ ದಾಳಿ ಸೇರಿದಂತೆ ವಿವಿಧ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿತ್ತು ಎಂದು ಪಂಜಾಬ್ ಪೊಲೀಸರು ಹೇಳಿದ್ದಾರೆ.
ಉತ್ತರಪ್ರದೇಶದ ಡಿಜಿಪಿ ಪ್ರಶಾಂತ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿದ್ದು, ಇದೊಂದು ಸಾಹಸಮಯ ಕೆಲಸ, ಉತ್ತರಪ್ರದೇಶ ಮತ್ತು ಪಂಜಾಬ್ ಪೊಲೀಸರ ನಡುವಿನ ಸಮನ್ವಯಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಹೇಳಿದ್ದಾರೆ.
ಒಂದು ವಾರದೊಳಗೆ ಪಂಜಾಬ್ ನ ಮೂರು ಪೊಲೀಸ್ ಠಾಣೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಕೃತ್ಯದಲ್ಲಿ ಖಾಲಿಸ್ತಾನಿ ಬೆಂಬಲಿಗರ ಕೈವಾಡದ ಶಂಕೆಯಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.