ಮಹಾರಾಷ್ಟ್ರ ವಿಧಾನಸಭಾ ಚುನಾವಣೆ | ಬಿಜೆಪಿ ಪ್ರಣಾಳಿಕೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷಗಳ ಪ್ರಸ್ತಾಪ!
ನಾಗಪುರ: ಇತ್ತೀಚಿನ ದಿನಗಳಲ್ಲಿ ಮಾನವ-ವನ್ಯಜೀವಿಗಳ ಸಂಘರ್ಷ ಘಟನೆಗಳು ಗಂಭೀರ ಸ್ವರೂಪ ಪಡೆಯತೊಡಗಿದ್ದು, ಈ ಬಾರಿಯ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ವನ್ಯಜೀವಿಗಳ ಉಪಟಳವು ಮಹಾರಾಷ್ಟ್ರ ಗ್ರಾಮಸ್ಥರನ್ನು ಕಂಗೆಡಿಸಿದೆ. ಇದರ ತೀವ್ರತೆ ಎಷ್ಟರ ಮಟ್ಟಿಗಿದೆಯೆಂದರೆ, ಇದೇ ಪ್ರಥಮ ಬಾರಿಗೆ ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಾನವ-ವನ್ಯಜೀವಿ ಸಂಘರ್ಷದ ವಿಷಯವನ್ನು ಸೇರ್ಪಡೆ ಮಾಡಿದೆ.
ಜನರ ಕಲ್ಯಾಣ ಕಾರ್ಯಕ್ರಮಗಳ ಭರವಸೆ ನೀಡುವುದರೊಂದಿಗೆ, ಮಾನವ-ವನ್ಯಜೀವಿ ಸಂಘರ್ಷದಿಂದ ಉಂಟಾಗಬಹುದಾದ ಜೀವ ಮತ್ತು ಆಸ್ತಿ ಹಾನಿಯನ್ನು ತಡೆಯಲು ಕೃತಕ ಬುದ್ಧಿಮತ್ತೆ ಹಾಗೂ ಡ್ರೋನ್ ನಂತಹ ಆಧುನಿಕ ತಂತ್ರಜ್ಞಾನಗಳನ್ನು ಬಳಕೆ ಮಾಡಲಾಗುವುದು ಎಂದೂ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ.
ವಿದರ್ಭ ಪ್ರಾಂತ್ಯದಲ್ಲಿ ಹುಲಿ-ಆನೆ-ಮಾನವ ಸಂಘರ್ಷ ತಲೆದೋರಿದ್ದು, ಯಾವುದೇ ಪಕ್ಷ ಕೂಡಾ ಈ ಮಹತ್ವದ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿಲ್ಲ. ಕಾಡಿಗೆ ಹತ್ತಿರವಿರುವುದರಿಂದ ಚಂದ್ರಾಪುರ್ ಜಿಲ್ಲೆಯ 1,500 ಗ್ರಾಮಗಳ ಪೈಕಿ ಸುಮಾರು 450 ಗ್ರಾಮಗಳು ಮಾನವ-ವನ್ಯಜೀವಿ ಸಂಘರ್ಷದ ಅಪಾಯ ಎದುರಿಸುತ್ತಿವೆ. ಈ ಗ್ರಾಮಗಳಲ್ಲಿ ಕೃತಕ ಬುದ್ಧಿಮತ್ತೆ(AI) ವ್ಯವಸ್ಥೆಯನ್ನು ಸ್ಥಾಪಿಸಲು ಭಾರಿ ಪ್ರಮಾಣದ ಬಂಡವಾಳ ಹೂಡಿಕೆ ಹಾಗೂ ದತ್ತಾಂಶ ಸಂಗ್ರಹಕ್ಕಾಗಿನ ನಿಯಂತ್ರಣ ಕೊಠಡಿಯಂಥ ಸಾಕಷ್ಟು ಮೂಲಸೌಕರ್ಯಗಳ ಅಗತ್ಯವಿದೆ.
ಬಿಜೆಪಿಯ ಪ್ರಣಾಳಿಕೆ ಭರವಸೆಯನ್ನು ಸ್ವಾಗತಿಸಿರುವ ಹಿರಿಯ ಅರಣ್ಯಾಧಿಕಾರಿಯೊಬ್ಬರು, “ಚುನಾವಣೆಯ ಸಂದರ್ಭದಲ್ಲಿ ಯಾವುದೇ ಪಕ್ಷಗಳಿಗೂ ಮಾನವ-ವನ್ಯಜೀವಿ ಸಂಘರ್ಷ, ಅರಣ್ಯ ಸಂರಕ್ಷಣೆ, ಪರಿಸರ ಮತ್ತು ಹಸಿರು ಹೊದಿಕೆ ಎಂದಿಗೂ ಆದ್ಯತೆಯೇ ಆಗಿರಲಿಲ್ಲ. ಈಗ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಕ್ಕೆ ಪರಿವರ್ತನೆಗೊಳ್ಳುವುದು ಅನಿವಾರ್ಯವಾಗಿದೆ” ಎಂದು ಹೇಳಿದ್ದಾರೆ.
ಮಾನವ-ವನ್ಯಜೀವಿಗಳ ಸಂಘರ್ಷದ ಪ್ರಕರಣಗಳಲ್ಲಿ ಏರಿಕೆಯಾಗಿದ್ದು, ಇದು ಮನುಷ್ಯರಿಗೆ ಅಪಾಯ, ಪ್ರಾಣಿಗಳಿಗೆ ಗಾಯ, ರಾಸುಗಳ ಸಾವು ಹಾಗೂ ಬೆಳೆ ಹಾನಿಯಂಥ ಪ್ರಕರಣಗಳನ್ನು ಒಳಗೊಂಡಿದೆ. 2018-19ನೇ ಸಾಲಿನಲ್ಲಿ ರಾಜ್ಯ ಸರಕಾರವು ರೂ. 28 ಲಕ್ಷ ಪರಿಹಾರವನ್ನು ವಿತರಿಸಿತ್ತು. ಆದರೆ, 2023-24ನೇ ಸಾಲಿನಲ್ಲಿ ಈ ಮೊತ್ತದ ಪ್ರಮಾಣ 137 ಕೋಟಿ ರೂ.ಗೆ ಏರಿಕೆಯಾಗಿದೆ” ಎಂದೂ ಅವರು ಹೇಳಿದ್ದಾರೆ.
“ನಾವು ಕೃತಕ ಬುದ್ಧಿಮತ್ತೆ ಯೋಜನೆಯನ್ನು ಪ್ರಮಾಣೀಕರಿಸಲು ನಾಗಪುರದ ವಿಎನ್ಐಡಿಟಿ ಸಂಸ್ಥೆಯನ್ನು ಸಮಾಲೋಚನಾ ಸಂಸ್ಥೆಯನ್ನಾಗಿ ನಿಯೋಜಿಸಿಕೊಂಡಿದ್ದು, ಐಐಟಿಯ ತಜ್ಞರನ್ನೊಳಗೊಂಡ ಸಮಿತಿಯನ್ನೂ ರಚಿಸಲಾಗಿದೆ. ಈ ತಂಡವು ಮುಂದಿನ ವಾರ ಕ್ಷೇತ್ರ ಭೇಟಿ ನಡೆಸುವ ನಿರೀಕ್ಷೆ ಇದೆ. ಒಮ್ಮೆ ವಿಎನ್ಐಡಿಟಿ ಸಂಸ್ಥೆಯು ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಪ್ರಮಾಣೀಕರಿಸಿದ ನಂತರ, ರಾಜ್ಯದ ಅನುದಾನದೊಂದಿಗೆ ಈ ವ್ಯವಸ್ಥೆಯನ್ನು ವ್ಯಾಪಕ ಪ್ರಮಾಣದಲ್ಲಿ ಜಾರಿಗೊಳಿಸಲಾಗುತ್ತದೆ. ಈ ವಿಷಯವನ್ನು ಬಿಜೆಪಿಯು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿರುವುದು ಉತ್ತಮ ಸಂಗತಿಯಾಗಿದೆ” ಎಂದು ಮತ್ತೊಬ್ಬ ಉನ್ನತ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.