ಭಾರತ-ಐರೋಪ್ಯ ಒಕ್ಕೂಟ ನಡುವಿನ ಸಂವಾದ ಮಣಿಪುರ, ಯುಎಪಿಎ, ಧಾರ್ಮಿಕ ಸ್ವಾತಂತ್ರವನ್ನು ಕೇಂದ್ರೀಕರಿಸಬೇಕು: ಸಾಮಾಜಿಕ ಹೋರಾಟಗಾರರು
ಹೊಸದಿಲ್ಲಿ: ಭಾರತ ಮತ್ತು ಐರೋಪ್ಯ ಒಕ್ಕೂಟ(ಇಯು) ನಡುವೆ ಮಾನವ ಹಕ್ಕುಗಳ ಸಂವಾದವು ನಾಮಮಾತ್ರ ಪ್ರಕ್ರಿಯೆಯಾಗುವುದನ್ನು ತಡೆಯಲು ಅದರ ವ್ಯಾಪ್ತಿಯನ್ನು ವಿಸ್ತರಿಸುವಂತೆ ಸಾಮಾಜಿಕ ಹೋರಾಟಗಾರರು ಕರೆ ನೀಡಿದ್ದಾರೆ.
ಐರೋಪ್ಯ ಆಯೋಗ,ಭಾರತ ಸರಕಾರ ಮತ್ತು ಇಯು ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳ ನಡುವೆ ಜ.8ರಂದು 11ನೇ ಇಯು-ಭಾರತ ಮಾನವ ಹಕ್ಕುಗಳ ಮಾತುಕತೆಗಳು ನಡೆದಿವೆ. ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯ,ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕು ಹೋರಾಟಗಾರರು,ನಾಗರಿಕ ಸಮಾಜ ಸಂಘಟನೆಗಳು ಮತ್ತು ಪತ್ರಕರ್ತರ ಹಕ್ಕುಗಳ ರಕ್ಷಣೆ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ.
ಭಾರತ ಮತ್ತು ಇಯು ಪ್ರಜಾಪ್ರಭುತ್ವ,ಸ್ವಾತಂತ್ರ್ಯ,ಕಾನೂನಿನ ಆಡಳಿತ ಹಾಗೂ ಎಲ್ಲ ಮಾನವ ಹಕ್ಕುಗಳ ಪ್ರಚಾರ ಮತ್ತು ರಕ್ಷಣೆ ಕುರಿತು ತಾವು ಹಂಚಿಕೊಂಡಿರುವ ತತ್ವಗಳು ಮತ್ತು ಮೌಲ್ಯಗಳಿಗೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಆದಾಗ್ಯೂ ನೆದರ್‌ಲ್ಯಾಂಡ್ ಮೂಲದ ಮಾನವ ಹಕ್ಕು ಪ್ರತಿಪಾದಕ ಗುಂಪು ‘ದಿ ಲಂಡನ್ ಸ್ಟೋರಿ(ಟಿಎಲ್‌ಎಸ್)’ ತನ್ನ ಹೇಳಿಕೆಯಲ್ಲಿ ‘ಐರೋಪ್ಯ ಆಯೋಗವು ತೃತೀಯ ದೇಶಗಳ ಭೂರಾಜಕೀಯ ಸ್ಥಾನಗಳಿಂದಾಗಿ ಅವುಗಳೊಂದಿಗೆ ಪಾಲುದಾರಿಕೆಗಾಗಿ ಮಾನವ ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಪರಸ್ಪರ ಗೌರವವನ್ನು ಮೂಲೆಗುಂಪು ಮಾಡುವ ಪೂರ್ವನಿರ್ದಶನವನ್ನು ಸ್ಥಾಪಿಸಲು ಸಾಧ್ಯವಿಲ್ಲ’ ಎಂದು ತಿಳಿಸಿದೆ.
ಭವಿಷ್ಯದ ಮಾತುಕತೆಗಳು ಇಂಟರ್ನೆಟ್ ಸ್ಥಗಿತ ಮತ್ತು ಕರ್ಫ್ಯೂ ಸೇರಿದಂತೆ ಮಣಿಪುರದಲ್ಲಿ ಜನಾಂಗೀಯ-ಧಾರ್ಮಿಕ ಸಂಘರ್ಷದ ಅಂತ್ಯ;ಮಾನವ ಹಕ್ಕು ಹೋರಾಟಗಾರರು,ವಿದ್ಯಾರ್ಥಿಗಳು ಮತ್ತು ಸಾಮಾಜಿಕ ಕಾರ್ಯಕರ್ತರು ಸರಕಾರದಿಂದ ದಮನಕ್ಕೊಳಗಾಗುವುದಿಲ್ಲ;ಭಾರತದಲ್ಲಿ ಈ ಗುಂಪುಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ(ಯುಎಪಿಎ)ಯ ಬಳಕೆಗೆ ಅಂತ್ಯ;ಪತ್ರಕರ್ತರಿಗೆ ಸೇರಿದಂತೆ ಅಭಿವ್ಯಕ್ತಿ ಸ್ವಾತಂತ್ರ್ಯ,ವಾಕ್ ಸ್ವಾತಂತ್ರ್ಯ ಹಾಗೂ ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗುವುದಿಲ್ಲ;ಧರ್ಮ ಅಥವಾ ನಂಬಿಕೆಯ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಮತ್ತು ಐರೋಪ್ಯ ಒಕ್ಕೂಟದಿಂದ ದೃಢವಾದ ಕ್ರಮಗಳನ್ನು ಒಳಗೊಂಡಿರಬೇಕು ಎಂದು ಟಿಎಲ್‌ಎಸ್ ಆಗ್ರಹಿಸಿದೆ.
ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವ ಕುರಿತು ಐರೋಪ್ಯ ಸಂಸತ್ತಿನ ನಿರ್ಣಯವು ಇಯು-ಭಾರತ ಸಂವಾದದ ಬಾಲಂಗೋಚಿಯಾಗದೆ ಕೇಂದ್ರಬಿಂದುವಾಗಬೇಕು ಎಂದೂ ಅದು ಒತ್ತಾಯಿಸಿದೆ.
ಇಯು-ಭಾರತ ಮುಕ್ತ ವ್ಯಾಪಾರ ಒಪ್ಪಂದ ಮತ್ತು ಡಿಜಿಟಲ್ ಪಾಲುದಾರಿಕೆಯ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಾಗ ಖಾಸಗಿತನದ ಹಕ್ಕು ಸೇರಿದಂತೆ ಭಾರತೀಯ ಮತ್ತು ಇಯು ನಾಗರಿಕರ ಮಾನವ ಹಕ್ಕುಗಳೊಂದಿಗೆ ರಾಜಿ ಮಾಡಿಕೊಳ್ಳಲಾಗುವುದಿಲ್ಲ ಎಂಬ ಭರವಸೆಗಾಗಿಯೂ ಟಿಎಲ್‌ಎಸ್ ಕರೆ ನೀಡಿದೆ.
ಭಾರತ-ಇಯು ದ್ವಿಪಕ್ಷೀಯ ಸಂವಾದವು ಎರಡೂ ದೇಶಗಳು ತಮ್ಮ ಮಾನವ ಹಕ್ಕು ಸಂಬಂಧಿತ ಕಳವಳಗಳನ್ನು ವ್ಯಕ್ತಪಡಿಸಲು ಅಪೂರ್ಣ ಆದರೆ ಮಹತ್ವದ ಅವಕಾಶವಾಗಿದೆ ಎಂದು ಬಣ್ಣಿಸಿರುವ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ಹ್ಯೂಮನ್ ರೈಟ್ಸ್ ವಾಚ್ ಸೇರಿದಂತೆ ಐದು ಸಂಘಟನೆಗಳು,ಐರೋಪ್ಯ ಒಕ್ಕೂಟವು ವಾಕ್,ಸಭೆ ಸೇರುವ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕುಗಳನ್ನು ಎತ್ತಿ ಹಿಡಿಯುವಂತೆ ಭಾರತ ಸರಕಾರಕ್ಕೆ ಕರೆ ನೀಡಬೇಕು ಎಂದು ಹೇಳಿವೆ.