ಕೇರಳ | ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ : 15 ಮಂದಿ ಆರೋಪಿಗಳ ಬಂಧನ
ಪತ್ತನಂತಿಟ್ಟ : ಕೇರಳದಲ್ಲಿ ಕ್ರೀಡಾಪಟುವಾಗಿದ್ದ ದಲಿತ ಬಾಲಕಿಯೋರ್ವಳ ಮೇಲೆ 4 ವರ್ಷಗಳಿಂದ 64 ಮಂದಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪಕ್ಕೆ ಸಂಬಂಧಿಸಿ ಈವರೆಗೆ 15 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಯುವತಿಯೋರ್ವಳು ಕಳೆದ ನಾಲ್ಕು ವರ್ಷಗಳಲ್ಲಿ 64 ಮಂದಿಯಿಂದ ಲೈಂಗಿಕ ಕಿರುಕುಳ ಎದುರಿಸಿದ್ದಾಗಿ ಬಹಿರಂಗಪಡಿಸಿದ್ದರು. ಕ್ರೀಡಾಪಟುವೋರ್ವ ಕ್ರೀಡಾ ಶಿಬಿರಗಳು ಸೇರಿದಂತೆ ಪತ್ತನಂತಿಟ್ಟ ಜಿಲ್ಲೆಯ ವಿವಿಧೆಡೆಗಳಲ್ಲಿ ಲೈಂಗಿಕ ಕಿರುಕುಳ ನೀಡಿದ್ದ. ಕೋಚ್ ಗಳು, ಸಹಪಾಠಿಗಳು ಹಾಗೂ ಸ್ಥಳೀಯರು ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಪುರಾವೆ ಸಿಕ್ಕಿದೆ. ಬಾಲಕಿ ಆರೋಪಿಗಳೊಂದಿಗೆ ಸಂವಹನ ನಡೆಸಲು ತನ್ನ ತಂದೆಯ ಮೊಬೈಲ್ ಫೋನ್ ಬಳಸಿದ್ದಾಳೆ. ಫೋನ್ ವಿವರಗಳು ಮತ್ತು ಆಕೆಯ ಬಳಿಯಿರುವ ಡೈರಿಯಿಂದ ಮಾಹಿತಿಯನ್ನು ಕಲೆ ಹಾಕುವ ಮೂಲಕ 40 ಆರೋಪಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಕರಣದಲ್ಲಿ 60ಕ್ಕೂ ಅಧಿಕ ಜನರು ಭಾಗಿಯಾಗಿರುವ ಶಂಕೆ ಇದ್ದು, ಪತ್ತನಂತಿಟ್ಟದ ವಿವಿಧ ಪೊಲೀಸ್ ಠಾಣೆಗಳಲ್ಲಿ ಈ ಕುರಿತು ಎಫ್ಐಆರ್‌ಗಳನ್ನು ದಾಖಲಿಸಲಾಗಿದೆ. ಆಕೆ ಅಪ್ರಾಪ್ತ ವಯಸ್ಸಿನವಳಾಗಿದ್ದಾಗ ಈ ಘಟನೆಗಳು ನಡೆದಿರುವುದರಿಂದ, ಆರೋಪಿಗಳ ವಿರುದ್ಧ ಪೋಕ್ಸೊ ಮತ್ತು ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಉನ್ನತ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಪತ್ತನಂತಿಟ್ಟ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರು ಈ ಕುರಿತು ಪ್ರತಿಕ್ರಿಯಿಸಿದ್ದು, ಪತ್ತನಂತಿಟ್ಟ ಜಿಲ್ಲೆಯ ಹೊರಗಿನ ವ್ಯಕ್ತಿಗಳು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿರಬಹುದು. ಬಾಲಕಿ 13 ವರ್ಷ ವಯಸ್ಸಿನಿಂದಲೂ ಲೈಂಗಿಕ ಶೋಷಣೆಗೆ ಒಳಗಾಗಿದ್ದಾಳೆ. ಇದು ಅಸಾಮಾನ್ಯ ಪ್ರಕರಣವಾದ್ದರಿಂದ, ಸಮಾಲೋಚನೆಗಾಗಿ ಆಕೆಯನ್ನು ಮನಶ್ಶಾಸ್ತ್ರಜ್ಞರ ಬಳಿಗೆ ಕಳುಹಿಸಲಾಗಿದೆ. ಈ ಯುವತಿಗೆ ಮೊಬೈಲ್ ಫೋನ್ ಇಲ್ಲದ ಕಾರಣ ತಂದೆಯ ಮೊಬೈಲ್ ಬಳಸುತ್ತಿದ್ದಳು. ಈ ಫೋನ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳ ಮಾಹಿತಿ ಇದೆ ಎಂದು ತಿಳಿಸಿದೆ.