ಜಗಳವಾಡಿದ ಬಳಿಕ ಬೇರೆ ಬೇರೆ ನಗರಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ಗಂಡ-ಹೆಂಡತಿ
ಹೊಸದಿಲ್ಲಿ: ಗಂಡ ಮತ್ತು ಹೆಂಡತಿ ಜಗಳವಾಡಿದ ಬಳಿಕ ಶುಕ್ರವಾರ ಬೇರೆ ಬೇರೆ ಸ್ಥಳಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಂಡತಿ ದಿಲ್ಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡರೆ, ಗಂಡ ಉತ್ತರಪ್ರದೇಶದ ಘಾಝಿಯಾಬಾದ್‌ನಲ್ಲಿ ಬದುಕು ಕೊನೆಗೊಳಿಸಿದ್ದಾರೆ.
28 ವರ್ಷದ ಶಿವಾನಿ ಈಶಾನ್ಯ ದಿಲ್ಲಿಯ ವಿದ್ಯುತ್ ಕಂಬದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದರೆ, ಅವರ 32 ವರ್ಷದ ಗಂಡ ವಿಜಯ ನೆರೆಯ ಘಾಝಿಯಾಬಾದ್‌ನಲ್ಲಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಶುಕ್ರವಾರ ಬೆಳಗ್ಗೆ ಶಿವಾನಿ ಮತ್ತು ವಿಜಯ ಜಗಳ ಮಾಡಿದ್ದರು. ಬಳಿಕ, ದಿಲ್ಲಿಯ ತನ್ನ ಮನೆಯಿಂದ ಹೊರಟಿದ್ದ ಶಿವಾನಿ, ಮನೆಯಿಂದ ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಲೋನಿ ವೃತ್ತದ ಸಮೀಪದ ವಿದ್ಯುತ್ ಕಂಬದಿಂದ ನೇಣು ಬಿಗಿದುಕೊಂಡರು ಎಂದು ಪೊಲೀಸರು ತಿಳಿಸಿದರು.
ಮಹಿಳೆಯ ಕಿಸೆಯಲ್ಲಿ ಪತ್ತೆಯಾದ ಮೊಬೈಲ್ ಫೋನ್ ಮೂಲಕ ಪೊಲೀಸರು ಅವರ ಮನೆಯವರನ್ನು ಸಂಪರ್ಕಿಸಿದರು. ಆಗ, ಗಂಡ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಅವರಿಗೆ ಗೊತ್ತಾಯಿತು.