ಇಂಡೋನೇಶ್ಯ, ಚೀನಾದ ಸೈಬರ್ ವಂಚಕರಿಗೆ 530 ವರ್ಚುವಲ್ ಫೋನ್ ಸಂಖ್ಯೆ: ಇಬ್ಬರು ಏರ್‌ಟೆಲ್ ಉದ್ಯೋಗಿಗಳ ಬಂಧನ
ಹೊಸದಿಲ್ಲಿ,: ಇಂಡೋನೇಶ್ಯ ಮತ್ತು ಚೀನಾದ ಸೈಬರ್ ವಂಚಕರಿಗೆ ವರ್ಚುವಲ್ ಫೋನ್ ಸಂಖ್ಯೆಗಳನ್ನು ನೀಡಿರುವ ಆರೋಪದಲ್ಲಿ ಇಬ್ಬರು ಏರ್‌ಟೆಲ್ ಮ್ಯಾನೇಜರ್‌ಗಳನ್ನು ಗುರುಗ್ರಾಮದಿಂದ ಬಂಧಿಸಲಾಗಿದೆ.
ಬಂಧಿತರನ್ನು ನೀರಜ್ ವಾಲಿಯ ಮತ್ತು ಹೇಮಂತ್ ಶರ್ಮಾ ಎಂಬುದಾಗಿ ಗುರುತಿಸಲಾಗಿದೆ. ಸೈಬರ್ ವಂಚನೆಯ ಸಂತ್ರಸ್ತರೊಬ್ಬರು ದೂರು ನೀಡಿದ ಬಳಿಕ ಬಂಧನ ನಡೆದಿದೆ.
ಮೂರ್ತ ರೂಪದ ಫೋನ್ ಲೈನ್ ಅಥವಾ ಸಿಮ್ ಕಾರ್ಡ್ ಬಳಸದೆ, ಕೇವಲ ಇಂಟರ್‌ನೆಟ್ ಮೂಲಕ ವರ್ಚುವಲ್ ಫೋನ್ ಸಂಖ್ಯೆಗಳಿಂದ ಫೋನ್ ಕರೆಗಳನ್ನು ಮಾಡಬಹುದಾಗಿದೆ. ಟೆಲಿಕಾಮ್ ಕಂಪೆನಿಗಳು ವರ್ಚುವಲ್ ಫೋನ್ ಸಂಖ್ಯೆಗಳನ್ನು ತುಂಬಾ ಫೋನ್ ಮಾಡಬೇಕಾದ ಅಗತ್ಯವನ್ನು ಹೊಂದಿರುವ ಕಂಪೆನಿಗಳು ಮತ್ತು ಕಾಲ್‌ಸೆಂಟರ್‌ಗಳಿಗೆ ನೀಡುತ್ತವೆ.
ಮನೆಯಿಂದ ಕೆಲಸ ಮಾಡುವ ಆಮಿಶವೊಡ್ಡಿದ ವಂಚಕರಿಂದಾಗಿ ತಾನು 10,000 ರೂ. ಕಳೆದುಕೊಂಡೆ ಎಂಬುದಾಗಿ ಮಹಿಳೆಯೊಬ್ಬರು ಕಳೆದ ವಾರ ದೂರು ಸಲ್ಲಿಸಿದ್ದರು. ಮಹಿಳೆಗೆ ಕರೆ ಮಾಡಲು ವಂಚಕರು ಬಳಸಿದ ಫೋನ್ ಸಂಖ್ಯೆಯ ಎಸ್‌ಟಿಡಿ ಕೋಡ್ ಗುರುಗ್ರಾಮದ್ದಾಗಿತ್ತು.
‘‘ಮೊದಲು, ವೆಬ್‌ಪೇಜ್‌ನಲ್ಲಿ ಹೊಟೇಲ್ ವಿಮರ್ಶೆಗಳನ್ನು ಮಾಡಿರುವುದಕ್ಕಾಗಿ ಮಹಿಳೆಯ ಖಾತೆಗೆ 200 ರೂ. ಹಾಕಲಾಗಿತ್ತು. ಬಳಿಕ, ಅವರನ್ನು ಟೆಲಿಗ್ರಾಮ್ ಗುಂಪೊಂದಕ್ಕೆ ಸೇರಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಸೂಚಿಸಲಾಯಿತು. ಇದು ಪ್ರಿಪೇಡ್ ಕೆಲಸವಾಗಿದ್ದು, ಅವರಿಗೆ ಅಧಿಕ ಲಾಭದ ಆಸೆಯನ್ನು ತೋರಿಸಲಾಗಿತ್ತು’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಸಂತ್ರಸ್ತೆಯನ್ನು ಸಂಪರ್ಕಿಸಲು ವಂಚಕರು ಬಳಸಿದ್ದ ವರ್ಚುವಲ್ ಫೋನ್ ಸಂಖ್ಯೆಯು ವಂಚಕ ಕಂಪೆನಿಯೊಂದಕ್ಕೆ ಸೇರಿದ್ದಾಗಿತ್ತು ಎನ್ನುವುದು ಪೊಲೀಸ್ ತನಿಖೆಯಿಂದ ತಿಳಿದುಬಂತು. ಬಳಿಕ, ಆ ಫೋನ್ ಸಂಖ್ಯೆಯನ್ನು ನೀರಜ್ ಮತ್ತು ಹೇಮಂತ್ ನೀಡಿದ್ದರು ಎನ್ನುವುದೂ ಬಯಲಾಯಿತು.
‘‘ಫೋನ್ ಸಂಖ್ಯೆಗಳನ್ನು ನೀಡುವಾಗ ಏರ್‌ಟೆಲ್ ಸ್ಥಳ ಪರಿಶೀಲನೆ ನಡೆಸುತ್ತದೆ. ಸ್ಥಳ ಪರಿಶೀಲನೆಯನ್ನು ನೀರಜ್ ನಡೆಸಿದ್ದನು ಮತ್ತು ಈ ತಂಡದ ನಾಯಕ ಹೇಮಂತ್ ಆಗಿದ್ದನು. ಅವರು ಟ್ರಾಯ್ ನಿಯಮಗಳನ್ನು ಉಲ್ಲಂಘಿಸಿ ನಕಲಿ ಕಂಪೆನಿಗೆ ಡಿಐಡಿ (ಡೈರೆಕ್ಟ್ ಇನ್‌ವಾರ್ಡ್ ಡಯಲಿಂಗ್) ವರ್ಚುವಲ್ ಲ್ಯಾಂಡ್‌ಲೈನ್ ಸಂಖ್ಯೆಯನ್ನು ನೀಡಿದ್ದರು’’ ಎಂದು ತನಿಖೆಯ ನೇತೃತ್ವ ವಹಿಸಿರುವ ಎಸಿಪಿ ಪ್ರಿಯಾಂಶು ದಿವಾನ್ ತಿಳಿಸಿದರು.
ಇಬ್ಬರು ಆರೋಪಿಗಳು ಇಂಡೋನೇಶ್ಯದ ಕಂಪೆನಿಯೊಂದಕ್ಕೆ ಸುಮಾರು 530 ವರ್ಚುವಲ್ ಫೋನ್ ಸಂಖ್ಯೆಗಳನ್ನು ನೀಡಿದ್ದರು ಎನ್ನುವುದು ಬಳಿಕ ಪೊಲೀಸ್ ತನಿಖೆಯಿಂದ ಗೊತ್ತಾಯಿತು. ಅವರು ಕೆಲವು ವರ್ಚುವಲ್ ಫೋನ್ ಸಂಖ್ಯೆಗಳನ್ನು ಚೀನಾದ ಸೈಬರ್ ವಂಚಕರಿಗೂ ನೀಡಿದ್ದರು ಎನ್ನಲಾಗಿದೆ. ಈ ಸಂಖ್ಯೆಗಳನ್ನು ದೇಶದಲ್ಲಿರುವ ಕಂಪೆನಿಗಳಿಗೆ ಮಾತ್ರ ನೀಡಬಹುದಾಗಿದೆ.