ಮೆಟಾ ಫ್ಯಾಕ್ಟ್ ಚೆಕ್ ನೀತಿ ರದ್ದು ಘೋಷಿಸಿದ ಬೆನ್ನಲ್ಲೇ ಫೇಸ್ ಬುಕ್, ಇನ್ ಸ್ಟಾಗ್ರಾಮ್ ಹೇಗೆ ಡಿಲಿಟ್ ಮಾಡುವುದು ಎಂದು ಹುಡುಕಾಡಿದ ಬಳಕೆದಾರರು : ವರದಿ
ಹೊಸದಿಲ್ಲಿ : ಮೆಟಾ ನೀತಿ ಬದಲಾವಣೆ ಮತ್ತು ಫ್ಯಾಕ್ಟ್ ಚೆಕ್ ಕೊನೆಗೊಳಿಸುವುದಾಗಿ ಹೇಳಿದ ಬೆನ್ನಲ್ಲೇ ಫೇಸ್ಬುಕ್, ಇನ್ ಸ್ಟಾಗ್ರಾಮ್ ಅನ್ನು ಹೇಗೆ ಅಳಿಸುವುದು ಎಂದು ಅನೇಕ ಬಳಕೆದಾರರು ಹುಡುಕುತ್ತಿದ್ದಾರೆ ಎಂದು TechCrunch ವರದಿಯು ತಿಳಿಸಿದೆ.
ಮೆಟಾ ಫ್ಯಾಕ್ಟ್ ಚೆಕ್ ನೀತಿಯನ್ನು ರದ್ದುಪಡಿಸಿದೆ ಅಂದರೆ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ ಪೋಸ್ಟ್ ಗಳಲ್ಲಿನ ಸತ್ಯಾಂಶಗಳನ್ನು ಪರಿಶೀಲಿಸಲು ಇದು ಫ್ಯಾಕ್ಟ್ ಚೆಕ್ ಸಂಸ್ಥೆಗಳನ್ನು ಬೆಂಬಲಿಸುತ್ತಿತ್ತು. ಅವರಿಗೆ ದೇಣಿಗೆಯನ್ನು ನೀಡುತ್ತಿತ್ತು. ಅದನ್ನು ನಿಲ್ಲಿಸುವುದಾಗಿ ಮೆಟಾ ಘೋಷಿಸಿದೆ. ಇದಲ್ಲದೆ ಕೆಲವೊಂದು ಪೋಸ್ಟ್ ಗಳನ್ನು ಫ್ಯಾಕ್ಟ್ ಚೆಕ್ ಗೆ ಒಳಪಡಿಸುವುದಿಲ್ಲ ಎಂದು ಮೆಟಾ ಹೇಳಿದೆ.
2025ರ ಜನವರಿ 7ರಿಂದ ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ನಲ್ಲಿನ ಕೆಲ ಪೋಸ್ಟ್ ಗಳ ಬಗ್ಗೆ ಸತ್ಯ ಪರಿಶೀಲನೆಯನ್ನು ನಿಲ್ಲಿಸುವುದಾಗಿ ಮೆಟಾ ಹೇಳಿದೆ. ಇದರ ಬೆನ್ನಲ್ಲೇ ಬಳಕೆದಾರರು ಫೇಸ್ಬುಕ್, ಇನ್ ಸ್ಟಾಗ್ರಾಮ್, ಥ್ರೆಡ್ ಗಳ ಖಾತೆಗಳನ್ನು ಹೇಗೆ ಅಳಿಸುವುದು ಎಂಬ ಬಗ್ಗೆ ಹುಡುಕಾಟ ನಡೆಸುತ್ತಿದ್ದಾರೆ.
ಮೆಟಾ ಸಿಇಒ ಮಾರ್ಕ್ ಜುಕರ್ ಬರ್ಗ್ ಅಸ್ತಿತ್ವದಲ್ಲಿನ ಫ್ಯಾಕ್ಟ್ ಚೆಕ್ ನೀತಿ ಕೊನೆಗೊಳಿಸುವುದಾಗಿ ಘೋಷಿಸಿದ್ದಾರೆ. ಇದು ತಂತ್ರಜ್ಞಾನ ಮತ್ತು ರಾಜಕೀಯ ವಲಯದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ಬೆಳವಣಿಗೆ ವಿಶೇಷವಾಗಿ ಬಲಪಂಥೀಯ ಗುಂಪುಗಳಿಗೆ ಆಗುತ್ತಿರುವ ಹಿನ್ನೆಡೆಯನ್ನು ತಪ್ಪಿಸುತ್ತದೆ ಎಂದು ಕೆಲ ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. ಮೆಟಾದ ನೆಟ್ ವರ್ಕ್ ಗಳಲ್ಲಿ ಹೆಚ್ಚು ವೇಗವಾಗಿ ಹರಡುವ ದ್ವೇಷಪೂರಿತ ಭಾಷಣ, ತಪ್ಪು ಮಾಹಿತಿ ಮತ್ತು ರಾಜಕೀಯ ವಿಷಯಗಳ ಹೆಚ್ಚಳಕ್ಕೆ ಇದು ಕಾರಣವಾಗಬಹುದು ಎಂಬ ಆತಂಕವನ್ನು ಈ ಕ್ರಮವು ಹುಟ್ಟುಹಾಕುತ್ತದೆ ಎಂದು TechCrunch ವರದಿ ಮಾಡಿದೆ.
TechCrunch ವರದಿಯ ಪ್ರಕಾರ, Google Trends ಅಂಕಿ-ಅಂಶಗಳ ಪ್ರಕಾರ Facebook ಅನ್ನು ಹೇಗೆ ಶಾಶ್ವತವಾಗಿ ಅಳಿಸುವುದು ಮತ್ತು Instagram ಖಾತೆಯನ್ನು ಹೇಗೆ ಅಳಿಸುವುದು ಎಂಬುವುದನ್ನು ಹುಡುಕಾಟ ನಡೆಸುವುದರಲ್ಲಿ ಬಲವಾದ ಏರಿಕೆಯನ್ನು ತೋರಿಸುತ್ತದೆ, ಇನ್ನುಳಿದವುಗಳಲ್ಲಿ ಫೇಸ್ ಬುಕ್ ತ್ಯಜಿಸುವುದು ಹೇಗೆ? ಥ್ರೆಡ್ ಖಾತೆಯನ್ನು ಅಳಿಸುವುದು ಹೇಗೆ? ಎಂಬ ಹುಡುಕಾಟದಲ್ಲಿ ಕೂಡ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ಕೆಲವು ದಿನಗಳಲ್ಲಿ ಈ ಹುಡುಕಾಟವು ಶೇಕಡಾ 5,000ಕ್ಕಿಂತ ಹೆಚ್ಚಿದೆ ಎಂದು ವರದಿಯು ತಿಳಿಸಿದೆ.
ಮೆಟಾದ ಪ್ಲಾಟ್ ಫಾರ್ಮ್ ಗಳು ಪ್ರಪಂಚದ ಇತರ ಭಾಗಗಳಲ್ಲಿ ಹಿಂಸಾಚಾರವನ್ನು ಉತ್ತೇಜಿಸಿರುವ ಬಗ್ಗೆಯೂ ಆರೋಪಗಳಿದೆ. ಮ್ಯಾನ್ಮಾರ್ ನಲ್ಲಿ ಹಿಂಸಾಚಾರವನ್ನು ಪ್ರಚೋದಿಸುವಲ್ಲಿ ಅದರ ಪ್ಲಾಟ್ ಫಾರ್ಮ್ ಗಳು ಹೇಗೆ ಪಾತ್ರವಹಿಸಿವೆ ಎಂಬುದನ್ನು ವರದಿಗಳು ಎತ್ತಿ ತೋರಿಸುತ್ತವೆ. ಅಲ್ಲಿ ಮಿಲಿಟರಿ ಸದಸ್ಯರು ರೋಹಿಂಗ್ಯಾ ಜನರ ನರಮೇಧಕ್ಕೆ ಕಾರಣವಾದ ಕ್ರಮಗಳನ್ನು ಉತ್ತೇಜಿಸಲು ಫೇಸ್ ಬುಕ್ ಅನ್ನು ಬಳಸಿದರು ಎಂದು ವರದಿಯು ಉಲ್ಲೇಖಿಸಿದೆ.