ರೂಪಾಯಿ ಮೌಲ್ಯ ಸಾರ್ವಕಾಲಿಕ ಪತನ ; ಕೇಂದ್ರ ಸರಕಾರ ಉತ್ತರಿಸಲಿ: ಪ್ರಿಯಾಂಕಾ ಗಾಂಧಿ
ಹೊಸದಿಲ್ಲಿ: ಅಮೆರಿಕ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿರುವುದಕ್ಕೆ ಕೇಂದ್ರ ಸರಕಾರ ಉತ್ತರಿಸಬೇಕೆಂದು ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ಶನಿವಾರ ಆಗ್ರಹಿಸಿದ್ದಾರೆ.
ಶುಕ್ರವಾರದಂದು ಅಮೆರಿಕದ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ಇದೇ ಮೊದಲ ಬಾರಿಗೆ 86ರ ಗಡಿಯನ್ನು ದಾಟಿದ್ದು, 18 ಪೈಸೆ ಇಳಿಕೆಯನ್ನು ಕಂಡಿತ್ತು. ಅಮೆರಿಕದ ಡಾಲರ್ ಕರೆನ್ಸಿ ಎದುರು ರೂಪಾಯಿ ಮೌಲ್ಯವು 86.04ರಲ್ಲಿ ಸ್ಥಿರಗೊಂಡಿತ್ತು.
‘‘ ಡಾಲರ್ ಎದುರು ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತವನ್ನು ಕಂಡಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಒಂದು ಡಾಲರ್ ಮೌಲ್ಯವು 86.4 ರೂಪಾಯಿ ಆಗಿದೆ’’ ಎಂದು ಪ್ರಿಯಾಂಕಾ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಿಂದಿ ಭಾಷೆಯಲ್ಲಿ ಪೋಸ್ಟ್ ಮಾಡಿದ್ದಾರೆ.
‘‘ಮನಮೋಹನ್‌ಸಿಂಗ್ ಅವರ ಅಧಿಕಾರವಧಿಯಲ್ಲಿ ಒಂದು ಡಾಲರ್ ರೂಪಾಯಿ ಮೌಲ್ಯವು 58-59 ರೂ.ಗೆ ತಲುಪಿತ್ತು.ಆಗ ನರೇಂದ್ರ ಮೋದಿ ಅವರು ರೂಪಾಯಿ ಮೌಲ್ಯವನ್ನು ಸರಕಾರದ ಪ್ರತಿಷ್ಠೆಯೊಂದಿಗೆ ನಂಟು ಕಲ್ಪಿಸಲು ಬಳಸಿಕೊಳ್ಳುತ್ತಿದ್ದರು. ನನಗೆ ಎಲ್ಲವೂ ತಿಳಿದಿದೆ. ಯಾವುದೇ ದೇಶದ ಕರೆನ್ಸಿಯ ಮೌಲ್ಯವು ಈ ರೀತಿ ಕುಸಿಯಬಾರದೆಂದು ಅವರು ಹೇಳಿಕೊಳ್ಳುತ್ತಿದ್ದರು’’ ಎಂದರು.
‘‘ ಇಂದು ಮೋದಿ ಅವರು ಸ್ವತಃ ಪ್ರಧಾನಿಯಾಗಿದ್ದಾರೆ ಹಾಗೂ ರೂಪಾಯಿಯ ಪತನದ ಹಿಂದಿನ ಎಲ್ಲಾ ದಾಖಲೆಗಳು ಮುರಿದುಹೋಗಿವೆ. ದೇಶದ ಜನತೆಗೆ ಪ್ರಧಾನಿಯವರು ಉತ್ತರಿಸಬೇಕಾಗಿದೆ ’’ಎಂದು ಪ್ರಿಯಾಂಕಾ ಹೇಳಿದ್ದಾರೆ.