ಸಂದೇಶ ಬರೆದಿದ್ದಕ್ಕೆ ಶಾಲಾ ಬಾಲಕಿಯರ ಶರ್ಟ್ ಬಿಚ್ಚುವಂತೆ ಸೂಚಿಸಿದ ಜಾರ್ಖಂಡ್ ಪ್ರಾಂಶುಪಾಲ!
ಧನಬಾದ್: ಸಂದೇಶ ಬರೆದಿದ್ದಕ್ಕೆ 80 ಶಾಲಾ ಬಾಲಕಿಯರಿಗೆ ಅವರ ಶರ್ಟ್ ಕಳಚುವಂತೆ ಖಾಸಗಿ ಶಾಲೆಯ ಪ್ರಾಂಶುಪಾಲರೊಬ್ಬರು ಸೂಚಿಸಿರುವ ಘಟನೆ ಜಾರ್ಖಂಡ್ ರಾಜ್ಯದ ಧನಬಾದ್ ಜಿಲ್ಲೆಯಲ್ಲಿ ನಡೆದಿದ್ದು, ಈ ಕುರಿತು ಶಾಲಾ ಮಂಡಳಿಯು ವಿಚಾರಣೆಗೆ ಆದೇಶಿಸಿದೆ ಎಂದು ಶನಿವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಾಲಕಿಯರು ತಮ್ಮ ಮೈಮೇಲೆ ಶರ್ಟ್ ಇಲ್ಲದೆ ಬ್ಲೇಝರ್‌ನಲ್ಲೇ ಮನೆಗೆ ಮರಳುವಂತೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಘಟನೆಯು ಜೋರಾಪೋಖರ್ ಪೊಲೀಸ್ ಠಾಣೆ ವ್ಯಾಪ್ತಿಯ ದಿಗಾವಡಿಹ್‌ನಲ್ಲಿರುವ ಪ್ರತಿಷ್ಠಿತ ಶಾಲೆಯೊಂದರಲ್ಲಿ ಶುಕ್ರವಾರ ನಡೆದಿದೆ ಎಂದು ಧನಬಾದ್ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ತಿಳಿಸಿದ್ದಾರೆ.
10 ತರಗತಿಯ ವಿದ್ಯಾರ್ಥಿನಿಯರು ತಮ್ಮ ಪರೀಕ್ಷೆಗಳು ಮುಕ್ತಾಯಗೊಂಡ ಸಂಭ್ರಮವನ್ನು ಆಚರಿಸಲು ಪರಸ್ಪರ ತಮ್ಮ ಶರ್ಟ್‌ಗಳ ಮೇಲೆ ಸಂದೇಶಗಳನ್ನು ಬರೆದುಕೊಳ್ಳುತ್ತಿದ್ದರು ಎಂದು ಸಂತ್ರಸ್ತ ವಿದ್ಯಾರ್ಥಿನಿಯರ ಪೋಷಕರು ಜಿಲ್ಲಾಧಿಕಾರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಆದರೆ, ವಿದ್ಯಾರ್ಥಿನಿಯರ ಸಂಭ್ರಮಾಚರಣೆಗೆ ಆಕ್ಷೇಪಿಸಿರುವ ಪ್ರಾಂಶುಪಾಲರು, ಅವರು ಕ್ಷಮಾಪಣೆ ಕೋರಿದರೂ ಶರ್ಟ್‌ಗಳನ್ನು ಕಳಚುವಂತೆ ಸೂಚಿಸಿದ್ದಾರೆ. ಎಲ್ಲ ವಿದ್ಯಾರ್ಥಿನಿಯರನ್ನು ಶರ್ಟ್ ಇಲ್ಲದೆ ಕೇವಲ ಬ್ಲೇಝರ್‌ನಲ್ಲಿ ಮನೆಗೆ ವಾಪಸ್ ಕಳಿಸಿದ್ದಾರೆ ಎಂದು ಪೋಷಕರು ಜಿಲ್ಲಾಧಿಕಾರಿ ಬಳಿ ಅಳಲು ತೋಡಿಕೊಂಡಿದ್ದಾರೆ.
ಈ ವಿಷಯದ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸಮಿತಿಯಲ್ಲಿ ಉಪ ವಿಭಾಗಾಧಿಕಾರಿ, ಜಿಲ್ಲಾ ಶಿಕ್ಷಣಾಧಿಕಾರಿ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಹಾಗೂ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಇರಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ತಿಳಿಸಿದ್ದಾರೆ.