ದಲ್ಲೆವಾಲ್ ಸ್ಥಿತಿ ಗಂಭೀರ, ಹೃದಯ ಸ್ತಂಭನದ ಭೀತಿ: ವೈದ್ಯರ ಆತಂಕ

Update: 2025-01-11 16:28 GMT

ಜಗಜಿತ್ ಸಿಂಗ್ ದಲ್ಲೆವಾಲ್ | PC : PTI 

ಚಂಡಿಗಡ : ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಅವರು ನಡೆಸುತ್ತಿರುವ ಆಮರಣಾಂತ ಉಪವಾಸವು ಶನಿವಾರ 47ನೇ ದಿನವನ್ನು ಪ್ರವೇಶಿಸಿದೆ. ಕಡಿಮೆ ರಕ್ತದೊತ್ತಡ, ಪ್ರಮುಖ ಅಂಗಾಂಗಗಳ ಆರೋಗ್ಯದಲ್ಲಿ ಏರಿಳಿತಗಳು ಮತ್ತು ಹೃದಯ ಸ್ತಂಭನ ಸಂಭವಿಸುವ ಭೀತಿಯೊಂದಿಗೆ ಅವರ ದೇಹಸ್ಥಿತಿಯು ಗಮನಾರ್ಹವಾಗಿ ಹದಗೆಟ್ಟಿದೆ.

ಜ.15ರಂದು ನಿಗದಿಯಾಗಿರುವ ತನ್ನ ಸಭೆಯನ್ನು ನಾಳೆ ಅಥವಾ ನಾಡಿದ್ದಿಗೆ ಹಿಂದೂಡುವಂತೆ ಮತ್ತು ಅದನ್ನು ಪಟಿಯಾಳಾದ ಬದಲು ಖನೌರಿ ಗಡಿಯಲ್ಲಿ ನಡೆಸುವಂತೆ ಕಿಸಾನ ಮಜ್ದೂರ್ ಸಂಘರ್ಷ ಮೋರ್ಚಾ ಮತ್ತು ಎಸ್‌ಕೆಎಂ(ರಾಜಕೀಯೇತರ) ನಾಯಕರು ಸಂಯುಕ್ತ ಕಿಸಾನ ಮೋರ್ಚಾ(ಎಸ್‌ಕೆಎಂ)ದ ನಾಯಕತ್ವವನ್ನು ಆಗ್ರಹಿಸಿದ್ದಾರೆ. ‘ಪ್ರತಿಯೊಂದು ನಿಮಿಷವೂ ಮುಖ್ಯವಾಗಿದೆ ’ ಎಂದು ಅವರು ಒತ್ತಿ ಹೇಳಿದ್ದಾರೆ.

ದಲ್ಲೆವಾಲ್ ಅವರ ಕಿಟೋನ್ ಮತ್ತು ಯೂರಿಕ್ ಆ್ಯಸಿಡ್ ಮಟ್ಟಗಳಲ್ಲಿ ಆತಂಕಕಾರಿ ಏರಿಕೆಯಾಗಿದ್ದರೆ, ಪೊಟ್ಯಾಷಿಯಂ, ಸೋಡಿಯಂ, ಕ್ಲೋರೈಡ್ ಮತ್ತು ಪ್ರೋಟಿನ್ ಮಟ್ಟಗಳು ಕುಸಿದಿವೆ.

ದಲ್ಲೆವಾಲ್ ಅವರ ಸ್ಥಿತಿ ಗಂಭೀರವಾಗಿದೆ. ಅವರ ಪೊಟ್ಯಾಷಿಯಂ ಮತ್ತು ಸೋಡಿಯಂ ಮಟ್ಟಗಳು ಕಡಿಮೆಯಾಗಿದ್ದು,ನೀರನ್ನು ಬಿಟ್ಟು ಬೇರೇನನ್ನೂ ಅವರು ಸೇವಿಸದ ಕಾರಣ ಅವು ಇನ್ನಷ್ಟು ಕುಸಿಯುತ್ತಿವೆ. ಸೋಡಿಯಂ ಮಟ್ಟದಲ್ಲಿ ಕುಸಿತವು ತಲೆತಿರುಗುವಿಕೆಗೆ ಕಾರಣವಾಗುತ್ತದೆ ಮತ್ತು ಏಕಾಗ್ರತೆಗೆ ತೊಂದರೆಯನ್ನುಂಟು ಮಾಡುತ್ತದೆ. ಅವರ ಸ್ನಾಯು ದ್ರವ್ಯರಾಶಿ ಹಲವಾರು ಪಟ್ಟು ಕಡಿಮೆಯಾಗಿದೆ ಮತ್ತು ಅವರು ಅಸ್ಥಿಪಂಜರದಂತಾಗಿದ್ದಾರೆ. ದಿನದಿಂದ ದಿನಕ್ಕೆ ಅವರ ಸ್ಥಿತಿಯು ಹದಗೆಡುತ್ತಿದೆ ಎಂದು ಖನೌರಿ ಗಡಿಯಲ್ಲಿ ವೈದ್ಯಕೀಯ ತಂಡದ ಮುಖ್ಯಸ್ಥ ಡಾ.ಅವತಾರ ಸಿಂಗ್ ತಿಳಿಸಿದರು.

75 ಹರೆಯದ ದಲ್ಲೆವಾಲ್ ತೀವ್ರ ಕೊರೆಯುವ ಚಳಿಯಲ್ಲಿ ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಮಲಗಿದ್ದಾರೆ ಎಂದು ಹೇಳಿದ ಡಾ.ಸಿಂಗ್, ಯಾವುದೇ ಸಮಯದಲ್ಲಿ ಏನು ಬೇಕಾದರೂ ಸಂಭವಿಸಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ದಲ್ಲೆವಾಲ್ ಅವರಿಗೆ ನಿಲ್ಲಲು ಅಥವಾ ಕುಳಿತುಕೊಳ್ಳಲು ಸಾಧ್ಯವಾಗುತ್ತಿಲ್ಲ, ಹೀಗಾಗಿ ಅವರ ತೂಕವನ್ನು ಅಳೆಯುವಲ್ಲಿ ವೈದ್ಯಕೀಯ ತಂಡವು ತೊಂದರೆಯನ್ನು ಎದುರಿಸುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News