ಭಯೋತ್ಪಾದನೆ ಪ್ರಕರಣ | ಐಸಿಸ್ ಸಹಚರನಿಗೆ ಜಾಮೀನು ನಿರಾಕರಿಸಿದ ದಿಲ್ಲಿ ಹೈಕೋರ್ಟ್

Update: 2025-01-11 16:04 GMT

ದಿಲ್ಲಿ ಹೈಕೋರ್ಟ್ | PTI 

ಹೊಸದಿಲ್ಲಿ : ಎನ್‌ಐಎ ದಾಖಲಿಸಿರುವ ಭಯೋತ್ಪಾದನೆ ಪ್ರಕರಣದಲ್ಲಿ ಸೈಬರ್ ಸ್ಪೇಸ್ ಬಳಸಿ ಯುವಜನರ ಮೂಲಭೂತೀಕರಣದಲ್ಲಿ ತೊಡಗಿದ್ದ ಆರೋಪಿ ಐಸಿಸ್ ಸಹಚರನಿಗೆ ಜಾಮೀನು ನೀಡಲು ದಿಲ್ಲಿ ಉಚ್ಚ ನ್ಯಾಯಾಲಯವು ನಿರಾಕರಿಸಿದೆ.

ಭಾರತದಲ್ಲಿ ಭಯೋತ್ಪಾದಕ ಗುಂಪಿನ ಸಿದ್ಧಾಂತದ ಪ್ರಚಾರಕ್ಕಾಗಿ ಮತ್ತು ಇತರ ವ್ಯಕ್ತಿಗಳನ್ನು ಭರ್ತಿ ಮಾಡಿಕೊಳ್ಳಲು ಟೆಲಿಗ್ರಾಮ್ ಗುಂಪುಗಳನ್ನು ಬಳಸಿದ್ದ ಆರೋಪವನ್ನು ಎದುರಿಸುತ್ತಿರುವ ಮುಹಮ್ಮದ್ ಹಿದಾಯತುಲ್ಲಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿಗಳಾದ ಪ್ರತಿಭಾ ಎಂ.ಸಿಂಗ್ ಮತ್ತು ಅಮಿತ್ ಶರ್ಮಾ ಅವರ ಪೀಠವು ವಜಾಗೊಳಿಸಿತು.

ತನಗೆ ಜಾಮೀನು ನಿರಾಕರಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದ ಹಿದಾಯತುಲ್ಲಾ, ಭಯೋತ್ಪಾದಕ ಸಂಘಟನೆಯೊಂದಿಗೆ ಕೇವಲ ಗುರುತಿಸಿಕೊಳ್ಳುವುದು ಅಥವಾ ಬೆಂಬಲಿಸುವುದು ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಅಪರಾಧವಲ್ಲ ಎಂದು ವಾದಿಸಿದ್ದ.

ಈ ವಾದವನ್ನು ತಿರಸ್ಕರಿಸಿದ ನ್ಯಾಯಾಲಯವು, ಗುರುಗ್ರಾಮದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಎಂಬಿಎ ಪದವೀಧರ ಹಿದಾಯತುಲ್ಲಾ ಭಯೋತ್ಪಾದಕ ಸಂಘಟನೆಯ‘ನಿಷ್ಕ್ರಿಯ’ ಬೆಂಬಲಿಗನಲ್ಲ,ಏಕೆಂದರೆ ಹಿಂಸಾತ್ಮಕ ಮಾರ್ಗಗಳ ಮೂಲಕವಾದರೂ ಸರಿಯೇ,‘ಖಿಲಾಫತ್ ಅನ್ನು ಸ್ಥಾಪಿಸಲು ಜಿಹಾದ್’ ಅನ್ನು ಆತ ಪ್ರತಿಪಾದಿಸಿದ್ದ ಎನ್ನುವುದನ್ನು ಲಭ್ಯ ಪುರಾವೆಗಳು ತೋರಿಸಿವೆ ಎಂದು ಹೇಳಿತು.

ಮೇಲ್ಮನವಿದಾರ 2018ರಲ್ಲಿ ಅಬು ಬಕ್ರ್ ಅಲ್ ಬಾಗ್ದಾದಿ ಮತ್ತು ಅಬು ಅಲ್-ಹಸನ್ ಅಲ್-ಕುರೇಶಿ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದ. ಅಬು ಬಕ್ರ್ ಅಲ್-ಬಾಗ್ದಾದಿ ಐಸಿಸ್ ನಾಯಕನಾಗಿದ್ದು,ಆರೋಪ ಪಟ್ಟಿಯ ಪ್ರಕಾರ ಜೂನ್ 2014ರಲ್ಲಿ ಆತ ‘ಖಲಿಫತ್’ ರಚನೆಯನ್ನು ಘೋಷಿಸಿದ್ದ ಎಂದು ನ್ಯಾಯಾಲಯವು ಶುಕ್ರವಾರ ತನ್ನ ತೀರ್ಪಿನಲ್ಲಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News