ಸಿರಿಯಾ ಮಸೀದಿಯಲ್ಲಿ ಕಾಲ್ತುಳಿತ: 4 ಮಂದಿ ಮೃತ್ಯು; 16 ಮಂದಿಗೆ ಗಾಯ
Update: 2025-01-11 16:52 GMT
ದಮಾಸ್ಕಸ್: ಸಿರಿಯಾ ರಾಜಧಾನಿ ದಮಾಸ್ಕಸ್‍ನ ಉಮಯ್ಯದ್ ಮಸೀದಿಯಲ್ಲಿ ಶುಕ್ರವಾರ ಕಾಲ್ತುಳಿತದಿಂದ 4 ಮಂದಿ ಸಾವನ್ನಪ್ಪಿದ್ದು 16 ಮಂದಿ ಗಾಯಗೊಂಡಿರುವುದಾಗಿ ಸರ್ಕಾರಿ ಸ್ವಾಮ್ಯದ ಸನಾ ಸುದ್ದಿಸಂಸ್ಥೆ ಶನಿವಾರ ವರದಿ ಮಾಡಿದೆ.
ಮಸೀದಿಯ ಬಳಿ ಉಚಿತ ಉಪಾಹಾರ ವಿತರಿಸುತ್ತಿದ್ದ ಸಂದರ್ಭ ಒಮ್ಮೆಲೇ ಜನರು ನುಗ್ಗಿದ್ದರಿಂದ ನೂಕುನುಗ್ಗಲು ಸಂಭವಿಸಿದೆ. ಆಹಾರದ ಪೊಟ್ಟಣ ಪಡೆಯುವ ಧಾವಂತದಲ್ಲಿ ಹಲವರು ಕೆಳಗೆ ಬಿದ್ದಿದ್ದು ಅವರನ್ನು ತುಳಿದುಕೊಂಡೇ ಗುಂಪು ಮುನ್ನುಗ್ಗಿದೆ. ಕನಿಷ್ಟ 4 ಮಂದಿ ಸಾವನ್ನಪ್ಪಿದ್ದು ಮಕ್ಕಳು, ಮಹಿಳೆಯರ ಸಹಿತ 16ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ದುರಂತಕ್ಕೆ ಕಾರಣ ಮತ್ತು ಹೊಣೆಗಾರರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ದಮಾಸ್ಕಸ್ ಗವರ್ನರ್ ಹೇಳಿದ್ದಾರೆ.