ಲೆಬನಾನ್: ನೂತನ ಅಧ್ಯಕ್ಷರಿಗೆ ಅರಬ್ ದೇಶಗಳ ಬೆಂಬಲ
ಬೈರೂತ್: ಲೆಬನಾನ್ ನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಸೇನಾ ಮುಖ್ಯಸ್ಥ ಜೋಸೆಫ್ ಅವುನ್‍ಗೆ ಅರಬ್ ದೇಶಗಳು ದೃಢವಾದ ಬೆಂಬಲ ಘೋಷಿಸಿವೆ.
ಲೆಬನಾನ್ ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯ ಯಶಸ್ಸಿನ ಬಗ್ಗೆ ಲೆಬನಾನ್ ಜನತೆಯನ್ನು ಸೌದಿ ಅರೆಬಿಯಾ ಅಭಿನಂದಿಸುವುದಾಗಿ ಲೆಬನಾನ್ ಗೆ ಸೌದಿಯ ರಾಯಭಾರಿ ವಾಲಿದ್ ಬುಖಾರಿ ಹೇಳಿದ್ದಾರೆ.
ಲೆಬನಾನ್‍ನ ಪುನರುಜ್ಜೀವನ, ಪುರ್ನನಿರ್ಮಾಣ, ಭದ್ರತೆ ಮತ್ತು ಸ್ಥಿರತೆಯ ಕಡೆಗೆ ಮಹತ್ವದ ಹೆಜ್ಜೆ ಇದಾಗಿದೆ. ಅಲ್ಲದೆ ಸುಧಾರಣೆಗೆ ಚಾಲನೆ ನೀಡುವ ಮತ್ತು ಅರಬ್ ಮತ್ತು ಅಂತರಾಷ್ಟ್ರೀಯ ವಿಶ್ವಾಸವನ್ನು ಮರುಸ್ಥಾಪಿಸುವ ಉಪಕ್ರಮವಾಗಿದೆ ಎಂದವರು ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ಸೈಪ್ರಸ್‍ನ ಅಧ್ಯಕ್ಷ ನಿಕೋಸ್ ಕ್ರಿಸ್ಟೊಡೌಲ್ಡೀಸ್ ಬೈರೂತ್ ಗೆ ಭೇಟಿ ನೀಡಿ ಅಧ್ಯಕ್ಷರಾಗಿ ಆಯ್ಕೆಗೊಂಡ ಜೋಸೆಫ್ ಅವುನ್‍ರನ್ನು ಅಭಿನಂದಿಸಿದ್ದರು. ಇರಾನ್ ಅಧ್ಯಕ್ಷ ಮಸೂದ್ ಪೆಝೆಶಿಕಿಯಾನ್ ಲೆಬನಾನ್ ಅಧ್ಯಕ್ಷರಿಗೆ ಅಭಿನಂದನಾ ಸಂದೇಶ ರವಾನಿಸಿದ್ದು `ಎಲ್ಲಾ ಕ್ಷೇತ್ರಗಳಲ್ಲೂ ದ್ವಿಪಕ್ಷೀಯ ಸಹಕಾರ ಸಂಬಂಧಗಳನ್ನು ಬಲಪಡಿಸಲು ಇರಾನ್ ಸರಕಾರ ಸಿದ್ಧವಾಗಿದೆ' ಎಂದು ಹೇಳಿದ್ದಾರೆ.
ಹಲವು ಅಂತರಾಷ್ಟ್ರೀಯ ಸಂಘಟನೆಗಳೂ ಲೆಬನಾನ್ ನ ನೂತನ ಅಧ್ಯಕ್ಷರನ್ನು ಬೆಂಬಲಿಸುವುದಾಗಿ ಹೇಳಿವೆ. ಇಸ್ರೇಲ್-ಹಿಜ್ಬುಲ್ಲಾ ನಡುವಿನ ಸಂಘರ್ಷದಿಂದ ಜರ್ಝರಿತಗೊಂಡಿರುವ ಲೆಬನಾನ್‍ನ ತುರ್ತು ಮಾನವೀಯ ಅಗತ್ಯಗಳನ್ನು ಈಡೇರಿಸಲು ಲೆಬನಾನ್ ಮಾನವೀಯ ನಿಧಿಯಿಂದ 30 ದಶಲಕ್ಷ ಡಾಲರ್ ಹಂಚಿಕೆ ಮಾಡುವುದಾಗಿ ಲೆಬನಾನ್‍ನಲ್ಲಿನ ವಿಶ್ವಸಂಸ್ಥೆ ಮಾನವೀಯ ಕಾರ್ಯಗಳ ಸಂಯೋಜಕ ಇಮ್ರಾನ್ ರಿಝಾ ಘೋಷಿಸಿದ್ದಾರೆ.