ಕೆನಡಾ: ಮಾರ್ಚ್ 9ರಂದು ಲಿಬರಲ್ ಪಾರ್ಟಿಯ ಹೊಸ ನಾಯಕನ ಆಯ್ಕೆ
ಟೊರಂಟೊ: ರಾಜೀನಾಮೆ ನೀಡಿರುವ ಪ್ರಧಾನಿ ಜಸ್ಟಿನ್ ಟ್ರೂಡೊರ ಉತ್ತರಾಧಿಕಾರಿಯ ಆಯ್ಕೆ ಪ್ರಕ್ರಿಯೆ ಮಾರ್ಚ್ 9ರಂದು ನಡೆಯಲಿದೆ ಎಂದು ಕೆನಡಾದ ಲಿಬರಲ್ ಪಾರ್ಟಿ ಅಧಿಕೃತವಾಗಿ ಘೋಷಿಸಿದೆ.
ದೃಢ ಮತ್ತು ಸುರಕ್ಷಿತ ರಾಷ್ಟ್ರವ್ಯಾಪಿ ಪ್ರಕ್ರಿಯೆಯ ಬಳಿಕ ಲಿಬರಲ್ ಪಾರ್ಟಿ ಹೊಸ ನಾಯಕನನ್ನು ಮಾರ್ಚ್ 9ರಂದು ಆರಿಸಲಿದೆ ಮತ್ತು 2025ರ ಚುನಾವಣೆಯಲ್ಲಿ ಹೋರಾಡಲು ಸಿದ್ಧವಾಗುತ್ತದೆ' ಎಂದು ಪಕ್ಷದ ಅಧ್ಯಕ್ಷ ಸಚಿತ್ ಮೆಹ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಪಾಲ್ಗೊಳ್ಳ ಬಯಸುವವರು ಜನವರಿ 23ರಂದು 3,50,000 ಕೆನಡಿಯನ್ ಡಾಲರ್ ಠೇವಣಿಯ ಜತೆ ತಮ್ಮ ನಾಮಪತ್ರ ಸಲ್ಲಿಸಬೇಕು. ಮತದಾನ ಮಾಡಲು ಬಯಸುವವರೂ ಜನವರಿ 27ರ ಮೊದಲು ಹೆಸರು ನೋಂದಾಯಿಸಿಕೊಳ್ಳಬೇಕು. ಕೆನಡಾ ಪ್ರಜೆಗಳು ಹಾಗೂ ಕಾಯಂ ನಿವಾಸಿಗಳು ಮಾತ್ರ ಮತ ಚಲಾಯಿಸಲು ಅರ್ಹರು(2013ರಲ್ಲಿ ಟ್ರೂಡೊ ಪಕ್ಷದ ಅಧ್ಯಕ್ಷರಾಗಿ ಚುನಾಯಿತರಾದಾಗ ತಾತ್ಕಾಲಿಕ ನಿವಾಸಿಗಳಿಗೆ ಸಹಾ ಮತದಾನಕ್ಕೆ ಅವಕಾಶವಿತ್ತು). ಮಾಜಿ ಉಪಪ್ರಧಾನಿ ಕ್ರಿಸ್ತಿಯಾ ಫ್ರೀಲ್ಯಾಂಡ್, ಬ್ಯಾಂಕ್ ಆಫ್ ಕೆನಡಾದ ಮಾಜಿ ಗವರ್ನರ್ ಮಾರ್ಕ್ ಕಾರ್ನಿ, ಬ್ರಿಟಿಷ್ ಕೊಲಂಬಿಯಾದ ಮಾಜಿ ಪ್ರೀಮಿಯರ್ ಕ್ರಿಸ್ತಿ ಕ್ಲಾರ್ಕ್ ಮತ್ತು ಭಾರತೀಯ ಕೆನಡಿಯನ್ ಸಂಸದ ಚಂದ್ರ ಆರ್ಯ ಲಿಬರಲ್ ಪಕ್ಷದ ನಾಯಕತ್ವದ ಸ್ಪರ್ಧೆಯ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವುದಾಗಿ ವರದಿಯಾಗಿದೆ.