ಪರಮಾಣು ಒಪ್ಪಂದ ಮಾಡಿಕೊಳ್ಳದಿದ್ದರೆ ಇರಾನ್ ಮೇಲೆ ಬಾಂಬ್ ದಾಳಿ: ಡೊನಾಲ್ಡ್ ಟ್ರಂಪ್ ಎಚ್ಚರಿಕೆ

ಡೊನಾಲ್ಡ್ ಟ್ರಂಪ್ | PC : PTI
ವಾಶಿಂಗ್ಟನ್: ಪರಮಾಣು ಕಾರ್ಯಕ್ರಮದ ಕುರಿತು ಅಮೆರಿಕದ ಜೊತೆ ನೂತನ ಒಪ್ಪಂದ ಮಾಡಿಕೊಳ್ಳದಿದ್ದರೆ, ಇರಾನ್ ಮೇಲೆ ಬಾಂಬ್ ದಾಳಿ ನಡೆಸಲಾಗುವುದು ಮತ್ತು ಎರಡನೆ ಹಂತದ ಸುಂಕ ವಿಧಿಸಲಾಗುವುದು ಎಂದು ರವಿವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
NBC ಸುದ್ದಿ ಸಂಸ್ಥೆ ಜೊತೆ ದೂರವಾಣಿ ಸಂದರ್ಶನದಲ್ಲಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಈ ಕುರಿತು ಇರಾನ್ ಹಾಗೂ ಅಮೆರಿಕ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ.ಅವರೇನಾದರೂ ಒಪ್ಪಂದ ಮಾಡಿಕೊಳ್ಳದಿದ್ದರೆ, ಅವರ ಮೇಲೆ ಬಾಂಬ್ ದಾಳಿ ನಡೆಸಲಾಗುವುದು. ನಾಲ್ಕು ವರ್ಷದ ಹಿಂದೆ ನಾನು ಮಾಡಿದ್ದಂತೆ, ಅವರ ಮೇಲೆ ಎರಡನೆ ಹಂತದ ಸುಂಕ ವಿಧಿಸುವ ಬಗ್ಗೆ ಯೋಚಿಸಲಾಗುವುದು ಎಂದು ಹೇಳಿದರು.
2015ರಲ್ಲಿ ದಿಗ್ಬಂಧನವನ್ನು ಹಿಂಪಡೆಯುವುದಕ್ಕೆ ಪ್ರತಿಯಾಗಿ ಇರಾನ್‌ನ ವಿವಾದಿತ ಪರಮಾಣು ಚಟುವಟಿಕೆಗಳ ಮೇಲೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ಹೇರಲು ಸಮ್ಮತಿಸಿ ಇರಾನ್ ಹಾಗೂ ಜಾಗತಿಕ ಶಕ್ತಿಗಳ ನಡುವೆ ಆಗಿದ್ದ ಒಪ್ಪಂದವನ್ನು ಡೊನಾಲ್ಡ್ ಟ್ರಂಪ್ ತಮ್ಮ 2017-21ನೇ ಅವಧಿಯಲ್ಲಿ ರದ್ದುಗೊಳಿಸಿದ್ದರು.
ಅಲ್ಲದೆ, ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ತೀವ್ರ ಸ್ವರೂಪದ ದಿಗ್ಬಂಧನವನ್ನೂ ಹೇರಿದ್ದರು. ಆ ಬಳಿಕ ಇರಾನ್ ತನ್ನ ಮೇಲೆ ವಿಧಿಸಿದ್ದ ಯುರೇನಿಯಂ ಫಲವತ್ತತೆಯ ಮಿತಿಗಿಂತ ಅತ್ಯಧಿಕ ಪ್ರಮಾಣದಲ್ಲಿ ಯುರೇನಿಯಂ ಫಲವತ್ತತೆಯಲ್ಲಿ ತೊಡಗಿಸಿಕೊಂಡಿದೆ.
ಅಮೆರಿಕದೊಂದಿಗೆ ಪರಮಾಣು ಒಪ್ಪಂದ ಮಾಡಿಕೊಳ್ಳಬೇಕು ಇಲ್ಲವೆ ಸೇನಾ ಕಾರ್ಯಾಚರಣೆಯನ್ನು ಎದುರಿಸಬೇಕು ಎಂಬ ಡೊನಾಲ್ಡ್ ಟ್ರಂಪ್‌ರ ಎಚ್ಚರಿಕೆಯನ್ನು ಇರಾನ್ ಇಲ್ಲಿಯವರೆಗೆ ನಿರ್ಲಕ್ಷಿಸುತ್ತಾ ಬಂದಿದೆ.
ಅಮೆರಿಕದೊಂದಿಗೆ ನೂತನ ಪರಮಾಣು ಒಪ್ಪಂದ ಮಾಡಿಕೊಳ್ಳಬೇಕು ಎಂಬ ಡೊನಾಲ್ಡ್ ಟ್ರಂಪ್‌ರ ಪತ್ರಕ್ಕೆ ಒಮನ್ ಮೂಲಕ ಇರಾನ್ ಪ್ರತಿಕ್ರಿಯೆ ರವಾನಿಸಿದೆ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ಹೇಳಿದ್ದಾರೆ ಎಂದು ಗುರುವಾರ IRNA ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇರಾನ್ ಉತ್ಕೃಷ್ಟ ಗುಣ ಮಟ್ಟದ ವಿದಳನ ಪರಿಶುದ್ಧತೆಯನ್ನು ಗಳಿಸಲು ಯುರೇನಿಯಂ ಅನ್ನು ಫಲವತ್ತುಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದು, ಆ ಮೂಲಕ ಅಣ್ವಸ್ತ್ರಗಳ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸುವ ಗೌಪ್ಯ ಕಾರ್ಯಸೂಚಿ ಹೊಂದಿದೆ ಎಂದು ಪಾಶ್ಚಾತ್ಯ ಶಕ್ತಿಗಳು ಆರೋಪಿಸುತ್ತಿವೆ. ಆದರೆ, ನಾವು ನಾಗರಿಕ ಪರಮಾಣು ಇಂಧನ ಅಭಿವೃದ್ಧಿಯ ಕಾರ್ಯಕ್ರಮದಲ್ಲಿ ತೊಡಗಿದ್ದೇವೆ ಎಂದು ಇರಾನ್ ಸಮರ್ಥಿಸಿಕೊಳ್ಳುತ್ತಾ ಬಂದಿದೆ.
ನಮ್ಮ ಪರಮಾಣು ಕಾರ್ಯಕ್ರಮವು ಸಂಪೂರ್ಣವಾಗಿ ನಾಗರಿಕ ಇಂಧನ ಉದ್ದೇಶವನ್ನು ಹೊಂದಿದೆ ಎಂದು ಇರಾನ್ ಸ್ಪಷ್ಟನೆ ನೀಡಿದೆ.