ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆ ವಿಸ್ತರಿಸಿದ ಇಸ್ರೇಲ್: 15 ಮಂದಿ ಸಾವು

PC : NDTV
ಜೆರುಸಲೇಂ: ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು. ಗಾಝಾದ ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಂಡು ಇಸ್ರೇಲ್‍ನ ಭದ್ರತಾ ವಲಯಕ್ಕೆ ಸೇರಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಬುಧವಾರ ಘೋಷಿಸಿದ್ದಾರೆ.
ಹೋರಾಟ ನಡೆಯುತ್ತಿರುವ ಪ್ರದೇಶಗಳಿಂದ ಜನಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಸ್ಥಳಾಂತರಿಸಲಾಗುವುದು ಎಂದು ಅವರು ಹೇಳಿದ್ದು ಹಮಾಸ್ ಅನ್ನು ತೊಡೆದುಹಾಕಲು ಗಾಝಾ ನಿವಾಸಿಗಳನ್ನು ಆಗ್ರಹಿಸಿದರು ಮತ್ತು ಇಸ್ರೇಲಿ ಒತ್ತೆಯಾಳುಗಳನ್ನು ಹಿಂತಿರುಗಿಸುವುದು ಯುದ್ಧ ಅಂತ್ಯಗೊಳಿಸಲು ಇರುವ ಏಕೈಕ ಮಾರ್ಗವಾಗಿದೆ ಎಂದು ಪ್ರತಿಪಾದಿಸಿದರು.
ಈ ಮಧ್ಯೆ, ಯುದ್ಧದಿಂದ ಜರ್ಝರಿತಗೊಂಡ ಗಾಝಾದಲ್ಲಿ ಬುಧವಾರ ಬೆಳಗ್ಗೆ 2 ಗಂಟೆಗಳ ಅವಧಿಯಲ್ಲೇ ಇಸ್ರೇಲ್‍ನ ವೈಮಾನಿಕ ದಾಳಿಯಲ್ಲಿ ಮಕ್ಕಳ ಸಹಿತ ಕನಿಷ್ಠ 15 ಮಂದಿ ಸಾವನ್ನಪ್ಪಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ಹೇಳಿದೆ.
ದಕ್ಷಿಣ ಗಾಝಾದ ಮಧ್ಯ ಖಾನ್‍ಯೂನಿಸ್‍ನಲ್ಲಿ ನಿರಾಶ್ರಿತ ಜನರು ಆಶ್ರಯ ಪಡೆದಿದ್ದ ಮನೆಯೊಂದರ ಮೇಲೆ ಇಸ್ರೇಲಿ ಸೇನೆ ನಡೆಸಿದ ಬಾಂಬ್ ದಾಳಿಯಲ್ಲಿ ಮಕ್ಕಳ ಸಹಿತ 13 ಮಂದಿ ಸಾವನ್ನಪ್ಪಿದ್ದಾರೆ. ಮಧ್ಯ ಗಾಝಾದ ನುಸೀರಾತ್ ಶಿಬಿರ ಪ್ರದೇಶದಲ್ಲಿ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಮತ್ತೆ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮೂದ್ ಬಸಾಲ್‍ರನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಇಸ್ರೇಲ್ ಈಗಾಗಲೇ ಗಾಝಾದೊಳಗೆ ಗಮನಾರ್ಹ ಬಫರ್ ವಲಯವನ್ನು ಸ್ಥಾಪಿಸಿದೆ. ಯುದ್ಧಕ್ಕೂ ಮೊದಲು ಗಾಝಾ ಪ್ರದೇಶದ ಅಂಚಿನ ಸುತ್ತಲೂ ಇದ್ದ ಬಫರ್ ವಲಯವನ್ನು ವಿಸ್ತರಿಸಿದ್ದು ಮಧ್ಯ ಗಾಝಾದ ಮೂಲಕ ನೆಟ್‍ಝಾರಿಮ್ ಕಾರಿಡಾರ್ ಎಂದು ಕರೆಯಲ್ಪಡುವ ದೊಡ್ಡ ಭದ್ರತಾ ಪ್ರದೇಶವನ್ನು ಸೇರಿಸಿದೆ. ಈ ಪ್ರದೇಶದಿಂದ ಫೆಲೆಸ್ತೀನೀಯರು ಸ್ವಯಂಪ್ರೇರಿತರಾಗಿ ನಿರ್ಗಮಿಸಲು ಅನುಕೂಲವಾಗುವಂತೆ ಯೋಜನೆ ರೂಪಿಸಿರುವುದಾಗಿ ಇಸ್ರೇಲ್ ನಾಯಕರು ಹೇಳಿದ್ದಾರೆ.
ಇದೇ ವೇಳೆ, ಗಾಝಾದ ನಿವಾಸಿಗಳನ್ನು ಶಾಶ್ವತವಾಗಿ ಸ್ಥಳಾಂತರಿಸಿ ಈ ಪ್ರದೇಶವನ್ನು ಅಮೆರಿಕ ನಿಯಂತ್ರಣದ ಕರಾವಳಿ ರೆಸಾರ್ಟ್ ಆಗಿ ಅಭಿವೃದ್ಧಿಪಡಿಸುವ ಯೋಜನೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಸ್ತುತಪಡಿಸಿದ್ದಾರೆ.
ಗಾಝಾದಲ್ಲಿ ಸುಮಾರು 2 ತಿಂಗಳ ಕದನ ವಿರಾಮ ಒಪ್ಪಂದವನ್ನು ಮುರಿದಿದ್ದ ಇಸ್ರೇಲ್ ಮಾರ್ಚ್ ಮಧ್ಯಭಾಗದಲ್ಲಿ ಗಾಝಾದಲ್ಲಿ ಭೂ ಕಾರ್ಯಾಚರಣೆ ಮರು ಆರಂಭಿಸಿದೆ. ಗಾಝಾದಲ್ಲಿ ಇನ್ನೂ ಬಂಧನದಲ್ಲಿರುವ 59 ಒತ್ತೆಯಾಳುಗಳನ್ನು ಕರೆತರಲು ಮಿಲಿಟರಿ ಒತ್ತಡ ಪ್ರಯೋಗ ಅತ್ಯುತ್ತಮ ಮಾರ್ಗ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.