ಇರಾನ್ ಜೊತೆ ನೇರ ಮಾತುಕತೆ: ಡೊನಾಲ್ಡ್ ಟ್ರಂಪ್ ಅಚ್ಚರಿಯ ಘೋಷಣೆ

ವಾಷಿಂಗ್ಟನ್: ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಇರಾನ್ ಜತೆ ಉನ್ನತ ಮಟ್ಟದಲ್ಲಿ ನೇರ ಮಾತುಕತೆ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆಗೆ ನಡೆಸಿದ ಸಭೆಯ ಬಳಿಕ ಟ್ರಂಪ್ ಈ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇರಾನ್ ಜೊತೆಗೆ ನೇರ ಮಾತುಕತೆ ಈಗಾಗಲೇ ಪ್ರಾರಂಭಗೊಂಡಿದೆ. ಬಹುಷಃ ಒಪ್ಪಂದ ಸಾಧ್ಯವಾಗಬಹುದು. ಶನಿವಾರ ಅತ್ಯಂತ ಮಹತ್ವದ ಉನ್ನತ ಮಟ್ಟದ ಸಭೆ ನಡೆಯಲಿದೆ ಎಂದು ಟ್ರಂಪ್ ಹೇಳಿಕೆ ನೀಡಿದ್ದಾರೆ. ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ ಹೊಸ ಒಪ್ಪಂದದ ಕುರಿತು ನೇರ ಮಾತುಕತೆಯಲ್ಲಿ ಅರ್ಥವಿಲ್ಲ ಎಂದು ಇರಾನ್ ಹೇಳಿಕೆ ನೀಡಿದ ಮರುದಿನ ಟ್ರಂಪ್ ಅವರ ಘೋಷಣೆ ಹೊರಬಿದ್ದಿದೆ.
`ಒಪ್ಪಂದವನ್ನು ಮಾಡಿಕೊಳ್ಳುವುದು ಇತರ ಆಯ್ಕೆಗಿಂತ ಹೆಚ್ಚು ಯೋಗ್ಯ ಮತ್ತು ಸೂಕ್ತ ಎಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇತರ ಆಯ್ಕೆಯು ನಾನು ಅಥವಾ ಇಸ್ರೇಲ್ ಭಾಗಿಯಾಗಲು ಬಯಸುವ ವಿಷಯವಲ್ಲ' ಎಂದು ಟ್ರಂಪ್ ಹೇಳಿದ್ದಾರೆ.
2018ರಲ್ಲಿ ಟ್ರಂಪ್ ಅವರ ಪ್ರಥಮ ಅಧ್ಯಕ್ಷೀಯ ಅವಧಿಯಲ್ಲಿ ಅಮೆರಿಕವು ಇರಾನ್ ಜೊತೆಗಿನ ಪರಮಾಣು ಒಪ್ಪಂದದಿಂದ ಹಿಂದೆ ಸರಿದಿತ್ತು. ಹೊಸ ಒಪ್ಪಂದ ಸಾಧ್ಯವಾಗದಿದ್ದರೆ ಅಮೆರಿಕದ ಸಹಾಯದೊಂದಿಗೆ ಇಸ್ರೇಲ್ ಇರಾನ್ ನ ಪರಮಾಣು ವ್ಯವಸ್ಥೆಯ ಮೇಲೆ ದಾಳಿ ನಡೆಸಬಹುದು ಎಂಬ ವ್ಯಾಪಕ ಊಹಾಪೋಹಗಳಿವೆ.