ಚೀನಾದ ವಿರುದ್ಧ 104% ಸುಂಕ: ಡೊನಾಲ್ಡ್ ಟ್ರಂಪ್ ಬೆದರಿಕೆ

ಡೊನಾಲ್ಡ್ ಟ್ರಂಪ್ | PC : NDTV
ವಾಷಿಂಗ್ಟನ್: ಅಮೆರಿಕದ ವಿರುದ್ಧ ಜಾರಿಗೊಳಿಸಿರುವ 34% ಪ್ರತೀಕಾರ ಸುಂಕವನ್ನು ಹಿಂಪಡೆಯದಿದ್ದರೆ ಚೀನಾದ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ.
ಪರಸ್ಪರ ಸುಂಕದ ವಿಷಯದಲ್ಲಿ ಇತರ ದೇಶಗಳು ಬಯಸಿದರೆ ಅಮೆರಿಕ ಮಾತುಕತೆಗೆ ಸಿದ್ಧವಿದೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ. ಯಾವುದೇ ದೇಶ ಹೆಚ್ಚುವರಿ ಸುಂಕ ವಿಧಿಸಿದರೆ ತಕ್ಷಣ ಹೊಸ ಮತ್ತು ಗಣನೀಯವಾಗಿ ಹೆಚ್ಚಿನ ಸುಂಕಗಳನ್ನು ಎದುರಿಸಬೇಕಾಗುತ್ತದೆ ಎಂಬ ತನ್ನ ಎಚ್ಚರಿಕೆಯ ಹೊರತಾಗಿಯೂ ಚೀನಾವು ಪ್ರತೀಕಾರ ಸುಂಕ ವಿಧಿಸಿದ್ದಕ್ಕಾಗಿ ಚೀನಾವನ್ನು ತರಾಟೆಗೆತ್ತಿಕೊಂಡ ಟ್ರಂಪ್, ಚೀನಾದೊಂದಿಗಿನ ಎಲ್ಲಾ ಮಾತುಕತೆಗಳನ್ನೂ ಕೊನೆಗೊಳಿಸಲಾಗುವುದು ಮತ್ತು ಇತರ ದೇಶಗಳೊಂದಿಗೆ ಮಾತುಕತೆ ತಕ್ಷಣ ಪ್ರಾರಂಭಿಸಲಾಗುವುದು ಎಂದರು.
ದೀರ್ಘಾವಧಿಯಿಂದ ವಹಿವಾಟು ದುರುಪಯೋಗದ ಜೊತೆಗೆ ಇದೀಗ ಚೀನಾ ಹೆಚ್ಚುವರಿ 34% ಸುಂಕ ವಿಧಿಸಿರುವುದನ್ನು ಹಿಂಪಡೆಯದಿದ್ದರೆ ಎಪ್ರಿಲ್ 9ರಿಂದ ಚೀನಾದ ಮೇಲೆ ಹೆಚ್ಚುವರಿ 50% ಸುಂಕ ವಿಧಿಸಲಾಗುವುದು ಎಂದು ಟ್ರಂಪ್ ಸಾಮಾಜಿಕ ಮಾಧ್ಯಮ `ಟ್ರುಥ್ ಸೋಷಿಯಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ರಂಪ್ ಎಚ್ಚರಿಕೆ ನೀಡಿರುವ ಹೊಸ ಸುಂಕಗಳು ಈಗಾಗಲೇ ಜಾರಿಗೊಳಿಸಿರುವ 34% ಸುಂಕಕ್ಕೆ ಸೇರ್ಪಡೆಗೊಳ್ಳಲಿದ್ದು ಒಟ್ಟು 104% ದರಕ್ಕೆ ತಲುಪಲಿದೆ ಎಂದು ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಚೀನಾ ಹಾಗೂ ಯುರೋಪಿಯನ್ ಯೂನಿಯನ್ ಸೇರಿದಂತೆ ಎಲ್ಲಾ ದೇಶಗಳ ಆಮದುಗಳ ಮೇಲೆ 10% ಸುಂಕವನ್ನೂ ಟ್ರಂಪ್ ಘೋಷಿಸಿದ್ದರು.
`ಮಹಾನ್, ಉತ್ತಮ ಅಮೆರಿಕದ ಸದ್ಭಾವನೆಯ ಪ್ರಯೋಜನ ಪಡೆದು ಅವರು (ಚೀನಾ) ಸಾಕಷ್ಟು ಸಂಗ್ರಹಿಸಿದ್ದಾರೆ. ಚೀನಾದ ಅನ್ಯಾಯದ ವ್ಯಾಪಾರ ಕ್ರಮಗಳಿಗೆ ಅಮೆರಿಕದ ಈ ಹಿಂದಿನ ಆಡಳಿತಗಳ ನೀತಿ ಪೂರಕವಾಗಿತ್ತು' ಎಂದು ಟ್ರಂಪ್ ದೂಷಿಸಿದ್ದಾರೆ.