ಗಾಝಾ: ಇಸ್ರೇಲ್ ದಾಳಿಯಲ್ಲಿ ಪತ್ರಕರ್ತ ಸಹಿತ 17 ಮಂದಿ ಮೃತ್ಯು

PC : aljazeera.com
ಗಾಝಾ: ಗಾಝಾ ಪಟ್ಟಿಯ ಎರಡು ಪ್ರಮುಖ ಆಸ್ಪತ್ರೆಗಳ ಹೊರಗಡೆಯಿದ್ದ ಟೆಂಟ್‍ಗಳ ಮೇಲೆ ರವಿವಾರ ತಡರಾತ್ರಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಸ್ಥಳೀಯ ವರದಿಗಾರನ ಸಹಿತ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು 6 ವರದಿಗಾರರ ಸಹಿತ 9 ಮಂದಿ ಗಾಯಗೊಂಡಿದ್ದಾರೆ. ಗಾಝಾದಲ್ಲಿ ಪ್ರತ್ಯೇಕ ದಾಳಿಯಲ್ಲಿ 15 ಮಂದಿ ಮೃತಪಟ್ಟಿರುವುದಾಗಿ ವೈದ್ಯಕೀಯ ಮೂಲಗಳು ಸೋಮವಾರ ಹೇಳಿವೆ.
ಖಾನ್ ಯೂನಿಸ್ ನಗರದ ನಾಸೆರ್ ಆಸ್ಪತ್ರೆಯ ಹೊರಗಿರುವ ಮಾಧ್ಯಮಗಳ ಶಿಬಿರದ ಮೇಲೆ ದಾಳಿ ನಡೆದ ಬಳಿಕ ಬೆಂಕಿ ಹತ್ತಿಕೊಂಡಿದ್ದು `ಫೆಲೆಸ್ತೀನ್ ಟುಡೆ' ಟಿವಿ ವಾಹಿನಿಯ ವರದಿಗಾರ ಯೂಸುಫ್ ಅಲ್-ಫಕಾವಿ ಹಾಗೂ ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು 6 ವರದಿಗಾರರು ಗಾಯಗೊಂಡಿದ್ದಾರೆ. ಮಧ್ಯ ಗಾಝಾದ ಡೀರ್ ಅಲ್-ಬಲಾಹ್ ನಗರದಲ್ಲಿ ಅಲ್-ಅಖ್ಸಾ ಆಸ್ಪತ್ರೆಯ ಹೊರಗಡೆಯಿದ್ದ ಟೆಂಟ್‍ನ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಮೂವರು ಗಾಯಗೊಂಡಿದ್ದಾರೆ. ಇದೇ ಪ್ರದೇಶದಲ್ಲಿ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದು ಇತರ ಮೂವರು ಗಾಯಗೊಂಡಿದ್ದಾರೆ. ಪ್ರತ್ಯೇಕ ದಾಳಿಯಲ್ಲಿ 6 ಮಹಿಳೆಯರು ಮತ್ತು ನಾಲ್ಕು ಮಕ್ಕಳ ಸಹಿತ 13 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.
ಗಾಝಾದಲ್ಲಿ 18 ತಿಂಗಳ ಯುದ್ಧದ ಸಂದರ್ಭ ಸಾವಿರಾರು ಮಂದಿ ಆಸ್ಪತ್ರೆಯ ಕಂಪೌಂಡ್‍ಗಳ ಹೊರಗೆ ಸ್ಥಾಪಿಸಿರುವ ಟೆಂಟ್‍ಗ ಳಲ್ಲಿ ಆಶ್ರಯ ಪಡೆದಿದ್ದು ಇಸ್ರೇಲ್ ಅವರನ್ನು ಗುರಿಯಾಗಿಸುವ ಸಾಧ್ಯತೆ ಕಡಿಮೆ ಎಂದು ಭಾವಿಸಿದ್ದರು. `ಹಮಾಸ್ ಸಶಸ್ತ್ರ ಹೋರಾಟಗಾರರು ವಸತಿ ಪ್ರದೇಶಗಳಲ್ಲಿ ತಮ್ಮ ನೆಲೆಗಳನ್ನು ಸ್ಥಾಪಿಸಿಕೊಂಡಿರುವುದು ನಾಗರಿಕರ ಸಾವು-ನೋವಿಗೆ ಕಾರಣವಾಗಿದೆ' ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.