ಉಕ್ರೇನ್ ನಲ್ಲಿ ರಶ್ಯದ ಪರ ಚೀನಾದ ಬಾಡಿಗೆ ಸಿಪಾಯಿಗಳ ಹೋರಾಟ: ಉಕ್ರೇನ್ ಅಧಿಕಾರಿಗಳ ಹೇಳಿಕೆ

PC : NDTV
ಕೀವ್: ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಶ್ಯದ ಸೇನೆಯ ಪರವಾಗಿ ಚೀನಾದ 150ಕ್ಕೂ ಅಧಿಕ ಬಾಡಿಗೆ ಸಿಪಾಯಿಗಳು ಹೋರಾಟ ಮಾಡುತ್ತಿದ್ದಾರೆ ಎಂದು ಉಕ್ರೇನ್ ಪ್ರತಿಪಾದಿಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ರಶ್ಯದ ಸೇನೆಯು ಚೀನಾದ ಬಾಡಿಗೆ ಸಿಪಾಯಿಗಳನ್ನು ನೇಮಿಸಿಕೊಂಡಿರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿದೆ ಎಂದು ಉಕ್ರೇನ್ ರಕ್ಷಣಾ ಇಲಾಖೆ ಹೇಳಿದೆ. ಇದಕ್ಕೂ ಮುನ್ನ, ಉಕ್ರೇನ್ ನ ಮಣ್ಣಿನಲ್ಲಿ ರಶ್ಯದ ಸೇನೆಯ ಜತೆಗೂಡಿ ಹೋರಾಟಕ್ಕೆ ಇಳಿದಿದ್ದ ಇಬ್ಬರು ಚೀನೀ ಪ್ರಜೆಗಳನ್ನು ಬಂಧಿಸಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್‍ಸ್ಕಿ ಘೋಷಿಸಿದ್ದರು. ರಶ್ಯದ ಪರ ಹೋರಾಡುತ್ತಿರುವ 155 ಚೀನೀ ಪ್ರಜೆಗಳ ಹೆಸರು, ಪಾಸ್‍ಪೋರ್ಟ್ ಸಂಖ್ಯೆ ಹಾಗೂ ವೈಯಕ್ತಿಕ ವಿವರವನ್ನು ಅವರು ಸುದ್ದಿಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದ್ದರು. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಶ್ಯಕ್ಕೆ ಚೀನಾವು ಬಲಿಷ್ಟ ರಾಜತಾಂತ್ರಿಕ ಬೆಂಬಲವನ್ನು ನೀಡುತ್ತಿದೆ.
ಈ ಮಧ್ಯೆ, ಉಕ್ರೇನ್ ಅಧಿಕಾರಿಗಳ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು ಇದು ಚೀನಾಕ್ಕೆ ಕೆಟ್ಟ ಹೆಸರು ತರಲು ನಡೆಸುತ್ತಿರುವ ಷಡ್ಯಂತ್ರದ ಒಂದು ಭಾಗವಾಗಿದೆ ಎಂದು ಚೀನಾ ಗುರುವಾರ ಪ್ರತಿಕ್ರಿಯಿಸಿದೆ.