ಗಾಝಾ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಸಿದ್ಧ: ಇಂಡೊನೇಶ್ಯಾ

ಇಂಡೊನೇಶ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ | PC : NDTV
ಜಕಾರ್ತ: ಇಸ್ರೇಲ್ ಮಿಲಿಟರಿ ಹಾಗೂ ಹಮಾಸ್ ನಡುವೆ ಗಾಝಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮಕ್ಕೆ ಒಳಗಾಗಿರುವ ಫೆಲೆಸ್ತೀನೀಯರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ಸಿದ್ಧ ಎಂದು ಇಂಡೊನೇಶ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ ಬುಧವಾರ ಹೇಳಿದ್ದಾರೆ.
ಕಳೆದ ತಿಂಗಳು ಗಾಝಾ ಪ್ರದೇಶದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ಮರು ಆರಂಭಿಸಿದಂದಿನಿಂದ ಸುಮಾರು 4 ಲಕ್ಷ ಗಾಝಾ ನಿವಾಸಿಗಳು ನೆಲೆ ಕಳೆದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಗಾಝಾ ನಿವಾಸಿಗಳಿಗೆ ತಾತ್ಕಾಲಿಕ ಆಶ್ರಯ ಒದಗಿಸಲು ನಾವು ಸಿದ್ಧತೆ ನಡೆಸಿದ್ದೇವೆ. ಗಾಯಾಳುಗಳು, ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಮೊದಲ ಹಂತದಲ್ಲಿ ಸುಮಾರು 1000 ಜನರನ್ನು ಕರೆತರುವ ನಿರೀಕ್ಷೆಯಿದೆ. ಅವರು ಚೇತರಿಸಿಕೊಳ್ಳುವವರಿಗೆ ಇಂಡೊನೇಶ್ಯಾದಲ್ಲಿ ಇರುತ್ತಾರೆ. ಗಾಝಾ ನಿವಾಸಿಗಳನ್ನು ಸ್ಥಳಾಂತರಗೊಳಿಸಲು ವಿಮಾನಗಳನ್ನು ಕಳುಹಿಸಲು ಸಿದ್ಧವಾಗಿದ್ದೇವೆ. ಗಾಯಾಳುಗಳು ಅಥವಾ ನಿರಾಶ್ರಿತ ಫೆಲೆಸ್ತಿನೀಯರನ್ನು ಸ್ಥಳಾಂತರಿಸುವ ಬಗ್ಗೆ ಮಾತುಕತೆ ನಡೆಸುವಂತೆ ವಿದೇಶಾಂಗ ಸಚಿವರಿಗೆ ಆದೇಶಿಸಿರುವುದಾಗಿ ಸುಬಿಯಾಂಟೊ ಹೇಳಿದ್ದಾರೆ.