ಪ್ರತೀಕಾರ ಕ್ರಮಕ್ಕೆ ಮುಂದಾಗಬೇಡಿ: ಚೀನಾಕ್ಕೆ ಶ್ವೇತಭವನ ಎಚ್ಚರಿಕೆ

PC : NDTV
ವಾಷಿಂಗ್ಟನ್: ವಿಶ್ವದ ಎರಡು ಬೃಹತ್ ಆರ್ಥಿಕತೆಗಳಾದ ಅಮೆರಿಕ ಮತ್ತು ಚೀನಾ ಕಳೆದ ವಾರದಿಂದ ಏಟಿಗೆ ಎದುರೇಟು ಎಂಬ ರೀತಿಯಲ್ಲಿ ಪರಸ್ಪರರ ವಿರುದ್ಧ ಸುಂಕ ಸಮರವನ್ನು ಸಾರಿವೆ. ಅಮೆರಿಕದ ಆಕ್ರಮಣಶೀಲ ನಡವಳಿಕೆಯ ಎದುರು ಬಾಗುವ ಪ್ರಶ್ನೆಯೇ ಇಲ್ಲ ಎಂದಿರುವ ಚೀನಾ, ಅಮೆರಿಕದ ಆಮದುಗಳ ಮೇಲಿನ 84% ಸುಂಕ ಎಪ್ರಿಲ್ 10ರ ಗುರುವಾರ ಮಧ್ಯಾಹ್ನದಿಂದಲೇ ಜಾರಿಗೆ ಬಂದಿದೆ ಎಂದು ಸ್ಪಷ್ಟಪಡಿಸಿದೆ.
ಅಮೆರಿಕ ಜೊತೆಗಿನ ವ್ಯಾಪಾರದ ಅಸಮತೋಲನವನ್ನು ಪರಿಹರಿಸಲು ಹೆಚ್ಚುವರಿ ಸುಂಕ ಪ್ರಕ್ರಿಯೆ ಘೋಷಿಸಿದ ಬಳಿಕ 75ಕ್ಕೂ ಅಧಿಕ ದೇಶಗಳು ಪ್ರತೀಕಾರ ಕ್ರಮಕ್ಕೆ ಮುಂದಾಗದೆ ಮಾತುಕತೆಗೆ ಒಲವು ತೋರಿದ ಕಾರಣ ಸುಂಕ ಸ್ಥಗಿತಕ್ಕೆ ಕ್ರಮ ಕೈಗೊಳ್ಳಲಾಗಿದೆ. ಈ 90 ದಿನಗಳ ಅವಧಿಯಲ್ಲಿ ಕೇವಲ 10% ಸುಂಕ ಮಾತ್ರ ಜಾರಿಯಲ್ಲಿರುತ್ತದೆ. ಆದರೆ ಜಾಗತಿಕ ಮಾರುಕಟ್ಟೆಗೆ ಚೀನಾ ಗೌರವ ತೋರಿಸದ ಕಾರಣ ಚೀನಾದ ಮೇಲಿನ ಸುಂಕವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ 125%ಕ್ಕೆ ಹೆಚ್ಚಿಸಲಾಗಿದೆ. ಅಮೆರಿಕ ಮತ್ತು ಇತರ ದೇಶಗಳನ್ನು ಆರ್ಥಿಕವಾಗಿ ಶೋಷಿಸುವ ದಿನಗಳು ಇನ್ನು ಮುಂದೆ ಅಸಾಧ್ಯ ಮತ್ತು ಸ್ವೀಕಾರಾರ್ಹವಲ್ಲ ಎಂಬುದನ್ನು ಮುಂದಿನ ದಿನಗಳಲ್ಲಿ ಚೀನಾ ಅರಿತುಕೊಳ್ಳುವ ವಿಶ್ವಾಸವಿದೆ ಎಂದು ಟ್ರಂಪ್ ಹೇಳಿದ್ದಾರೆ.
ಚೀನಾವನ್ನು ಉದಾಹರಣೆಯಾಗಿ ಉಲ್ಲೇಖಿಸಿರುವ ಶ್ವೇತಭವನ ` ಪ್ರತೀಕಾರ ಕ್ರಮಕ್ಕೆ ಮುಂದಾಗಬೇಡಿ. ನಿಮಗೆ ಬಹುಮಾನ ದೊರಕುತ್ತದೆ' ಎಂದು ವ್ಯಾಪಾರ ಪಾಲುದಾರರಿಗೆ ಎಚ್ಚರಿಕೆ ನೀಡಿದೆ. ಅಮೆರಿಕದ ಸುಂಕ ಕ್ರಮಗಳು ಎಲ್ಲಾ ದೇಶಗಳ ಕಾನೂನುಬದ್ಧ ಹಿತಾಸಕ್ತಿಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯ ಟೀಕಿಸಿದೆ.
ಬುಧವಾರ ಮಹತ್ವದ ಬೆಳವಣಿಗೆಯೊಂದರಲ್ಲಿ ಚೀನಾ ಹೊರತುಪಡಿಸಿ ಇತರ ಎಲ್ಲಾ ದೇಶಗಳ ಮೇಲೆ ವಿಧಿಸಿದ್ದ ಸುಂಕಗಳನ್ನು 90 ದಿನ ಸ್ಥಗಿತಗೊಳಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ, ಚೀನಾದ ಸರಕುಗಳ ಮೇಲಿನ ಸುಂಕವನ್ನು 125%ಕ್ಕೆ ಹೆಚ್ಚಿಸಿರುವುದಾಗಿ ಘೋಷಿಸಿದ್ದಾರೆ.
ಸುಂಕ ಸಮರವನ್ನು ನಿಲ್ಲಿಸುವಂತೆ ಕಳೆದ ಕೆಲವು ದಿನಗಳಿಂದ ಸಹ ರಿಪಬ್ಲಿಕನ್ನರು ಮತ್ತು ವ್ಯಾಪಾರ ಕಾರ್ಯನಿರ್ವಾಹಕರು ಟ್ರಂಪ್ ಅವರನ್ನು ಆಗ್ರಹಿಸುತ್ತಿದ್ದಾರೆ. ಸುಂಕ ಕ್ರಮಗಳಿಂದ ಪ್ರಮುಖ ವ್ಯಾಪಾರ ಸಮರ, ಜಾಗತಿಕ ಮಾರುಕಟ್ಟೆ ಬಿಕ್ಕಟ್ಟಿನ ಜತೆಗೆ ಜಾಗತಿಕ ಹಣದುಬ್ಬರಕ್ಕೆ ಕಾರಣವಾಗಬಹುದು ಎಂಬ ಕಳವಳ, ಆತಂಕವೂ ವ್ಯಕ್ತವಾಗಿದೆ.