ಅಮೆರಿಕದ ಮೇಲೆ 125% ಪ್ರತೀಕಾರ ಸುಂಕ ವಿಧಿಸಿದ ಚೀನಾ

ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ | PC : PTI
ಬೀಜಿಂಗ್: ಒತ್ತಡ, ಬೆದರಿಕೆ, ಬ್ಲ್ಯಾಕ್ಮೇಲ್ ತಂತ್ರಗಳಿಂದ ನಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿರುವ ಚೀನಾ, ಅಮೆರಿಕದ ಆಮದುಗಳ ಮೇಲಿನ ಸುಂಕವನ್ನು 125%ಕ್ಕೆ ಏರಿಸುವುದಾಗಿ ಶುಕ್ರವಾರ ಘೋಷಿಸಿದೆ.
84% ಇದ್ದ ಸುಂಕವನ್ನು 125%ಕ್ಕೆ ಹೆಚ್ಚಿಸಲಾಗಿದ್ದು ಇದು ಎಪ್ರಿಲ್ 12ರಿಂದ ಜಾರಿಗೆ ಬರಲಿದೆ ಎಂದು ಚೀನಾ ಹೇಳಿದ್ದು, ಆದರೆ ಇದನ್ನು ಮತ್ತಷ್ಟು ಏರಿಸುವ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದೆ. `ಒಂದು ವೇಳೆ ಅಮೆರಿಕ ಸುಂಕವನ್ನು ಮತ್ತಷ್ಟು ಹೆಚ್ಚಿಸಿದರೆ ಅದಕ್ಕೆ ಆರ್ಥಿಕ ದೃಷ್ಟಿಯಿಂದ ಯಾವುದೇ ಅರ್ಥವಿರುವುದಿಲ್ಲ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಒಂದು ತಮಾಷೆಯಾಗಿ ಗುರುತಿಸಿಕೊಳ್ಳುತ್ತದೆ' ಎಂದು ಚೀನಾದ ವಿದೇಶಾಂಗ ಇಲಾಖೆ ಹೇಳಿದೆ.
ಚೀನಾದ ಮೇಲೆ ಅಸಹಜವಾಗಿ ಹೆಚ್ಚಿನ ಸುಂಕವನ್ನು ಹೇರುವುದು ಅಂತರಾಷ್ಟ್ರೀಯ ಮತ್ತು ಆರ್ಥಿಕ ವ್ಯಾಪಾರ ನಿಯಮಗಳು, ಮೂಲಭೂತ ಆರ್ಥಿಕ ಕಾನೂನುಗಳು ಮತ್ತು ಸಾಮಾನ್ಯ ಜ್ಞಾನದ ಉಲ್ಲಂಘನೆಯಾಗಿದೆ. ಮತ್ತು ಇದು ಸಂಪೂರ್ಣವಾಗಿ ಏಕಪಕ್ಷೀಯ ಬೆದರಿಸುವಿಕೆ ಮತ್ತು ಬಲಾತ್ಕಾರವಾಗಿದೆ ಎಂದು ಚೀನಾದ ವಿದೇಶಾಂಗ ಇಲಾಖೆಯನ್ನು ಉಲ್ಲೇಖಿಸಿ `ರಾಯ್ಟರ್ಸ್' ವರದಿ ಮಾಡಿದೆ.
►ಯುರೋಪಿಯನ್ ಯೂನಿಯನ್ ಬೆಂಬಲ ಬಯಸಿದ ಚೀನಾ
ಏಕಪಕ್ಷೀಯ ಬೆದರಿಕೆಯನ್ನು ವಿರೋಧಿಸಲು ಚೀನಾದ ಜೊತೆ ಯುರೋಪಿಯನ್ ಯೂನಿಯನ್ ನಿಲ್ಲಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿಂಪಿಂಗ್ ಶುಕ್ರವಾರ ಆಗ್ರಹಿಸಿದ್ದಾರೆ.
ಏಕಪಕ್ಷೀಯ ಬೆದರಿಕೆ ಪದ್ದತಿಯನ್ನು ಜಂಟಿಯಾಗಿ ವಿರೋಧಿಸುವಲ್ಲಿ ಚೀನಾ ಮತ್ತು ಯುರೋಪ್ ತಮ್ಮ ಅಂತರಾಷ್ಟ್ರೀಯ ಹೊಣೆಗಾರಿಕೆಯನ್ನು ಪೂರ್ಣಗೊಳಿಸಬೇಕಿದೆ ಎಂದು ಚೀನಾಕ್ಕೆ ಭೇಟಿ ನೀಡಿರುವ ಸ್ಪೇನ್ ಪ್ರಧಾನಿ ಪೆಡ್ರೋ ಸ್ಯಾಂಚೆಸ್ ಜೊತೆಗಿನ ಸಭೆಯ ಬಳಿಕ ಕ್ಸಿಜಿಂಪಿಂಗ್ ಹೇಳಿದ್ದಾರೆ.
ಅಮೆರಿಕದ ಜೊತೆಗಿನ ವ್ಯಾಪಾರ ಸಮರವನ್ನು ಹೆಚ್ಚಿಸಲು ಚೀನಾಕ್ಕೆ ಯಾವ ಭಯವೂ ಇಲ್ಲ . ವ್ಯಾಪಾರ ಸಮರದಲ್ಲಿ ಯಾರೂ ಗೆಲ್ಲುವುದಿಲ್ಲ ಮತ್ತು ಜಾಗತಿಕ ವ್ಯವಸ್ಥೆಯ ವಿರುದ್ಧ ಹೋಗುವುದು ಸ್ವಯಂ- ಪ್ರತ್ಯೇಕತೆಗೆ ಮಾತ್ರ ಕಾರಣವಾಗುತ್ತದೆ' ಎಂದು ಜಿಂಪಿಂಗ್ ಹೇಳಿದ್ದಾರೆ. ಯುರೋಪಿಯನ್ ಯೂನಿಯನ್ನ ಜತೆಗಿನ ಸಂಬಂಧ ಸುಧಾರಿಸುವತ್ತ ಗಮನ ಹರಿಸಿರುವಂತೆಯೇ ಚೀನಾವು ವಿಯೆಟ್ನಾಮ್, ಮಲೇಶ್ಯಾ ಮತ್ತು ಕಂಬೋಡಿಯಾ ದೇಶಗಳ ಜತೆಗಿನ ಆರ್ಥಿಕ ಪಾಲುದಾರಿಕೆ ವೃದ್ಧಿಸಲು ಮುಂದಾಗಿದೆ.