ಚೀನಾದ ನರ್ಸಿಂಗ್ ಹೋಂನಲ್ಲಿ ಬೆಂಕಿ ದುರಂತ; 20 ಮಂದಿ ಸಾವು
Update: 2025-04-09 22:53 IST

ಬೀಜಿಂಗ್: ಉತ್ತರ ಚೀನಾದ ಹೆಬೆಯ್ ಪ್ರಾಂತದ ಚೆಂಗ್ಡೆ ನಗರದ ನರ್ಸಿಂಗ್ ಹೋಂನಲ್ಲಿ ಸಂಭವಿಸಿದ ಅಗ್ನಿದುರಂತದಲ್ಲಿ 20 ಮಂದಿ ಸಾವನ್ನಪ್ಪಿರುವುದಾಗಿ ಸರ್ಕಾರಿ ಸ್ವಾಮ್ಯದ ಕ್ಸಿನ್ ಹುವಾ ಸುದ್ದಿಸಂಸ್ಥೆ ಬುಧವಾರ ವರದಿ ಮಾಡಿದೆ.
260 ಹಿರಿಯ ನಾಗರಿಕರು ಆರೈಕೆ ಪಡೆಯುತ್ತಿದ್ದ ನರ್ಸಿಂಗ್ ಹೋಂನಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ತಂಡ 2 ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ್ದು 20 ಮಂದಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ತೀವ್ರ ಅಸ್ವಸ್ಥಗೊಂಡಿರುವ 19 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನರ್ಸಿಂಗ್ ಹೋಂನ ಉಸ್ತುವಾರಿ ವಹಿಸಿದ್ದ ಓರ್ವನನ್ನು ಬಂಧಿಸಲಾಗಿದ್ದು ದುರಂತದ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.