ಮುಂದುವರಿದ ಸುಂಕ ಸಮರ ; ಚೀನಾದ ಮೇಲಿನ ಸುಂಕ 145%ಕ್ಕೆ ಹೆಚ್ಚಿಸಿದ ಟ್ರಂಪ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್ : ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಮರ ಮತ್ತಷ್ಟು ತೀವ್ರಗೊಂಡಿದ್ದು ಚೀನಾದ ಆಮದಿನ ಮೇಲಿನ ಸುಂಕವನ್ನು ಮತ್ತೆ 20% ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಇದರೊಂದಿಗೆ ಚೀನಾದ ಆಮದುಗಳ ಮೇಲೆ ಅಮೆರಿಕ 145% ಸುಂಕ ವಿಧಿಸಿದಂತಾಗಿದೆ.
ಆದರೆ ಇದರಿಂದ ವಿಚಲಿತಗೊಳ್ಳದ ಚೀನಾ, ಪ್ರತೀಕಾರ ಕ್ರಮವಾಗಿ ಅಮೆರಿಕದ ಆಮದುಗಳ ಮೇಲಿನ ಸುಂಕವನ್ನು 125% ಕ್ಕೆ ಹೆಚ್ಚಿಸಿದೆ. ಜೊತೆಗೆ, ಅಮೆರಿಕದ ಹಾಲಿವುಡ್ನಿಂದ ಆಮದು ಮಾಡಿಕೊಳ್ಳುವ ಸಿನೆಮಾಗಳ ಮೇಲೆ ನಿರ್ಬಂಧ ವಿಧಿಸಿದೆ.
ಈ ತಿಂಗಳು ಆರಂಭಗೊಂಡಿದ್ದ ಸುಂಕ ಸಮರ ಇದೀಗ ಉಭಯ ದೇಶಗಳ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಚೀನಾದ ಆಮದುಗಳ ಮೇಲಿನ ಸುಂಕವನ್ನು 125%ಕ್ಕೆ ಹೆಚ್ಚಿಸಿ ಬುಧವಾರ ಟ್ರಂಪ್ ಆದೇಶ ಜಾರಿಗೊಳಿಸಿದ್ದರು. ಇದಕ್ಕೆ ಪ್ರತಿಯಾಗಿ, ಪ್ರತೀಕಾರ ಕ್ರಮಕ್ಕೆ ಮುಂದಾಗಬಾರದು ಎಂಬ ಶ್ವೇತಭವನದ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಚೀನಾವು ಅಮೆರಿಕದ ಆಮದುಗಳ ಮೇಲಿನ ಸುಂಕವನ್ನು 84%ಕ್ಕೆ ಹೆಚ್ಚಿಸಿತ್ತು. ಸುಂಕ ಸಮರ ಮುಂದುವರಿಸಿರುವ ಟ್ರಂಪ್, ಚೀನಾದ ಮೇಲೆ ಹೆಚ್ಚುವರಿ 20% ಸುಂಕ ಜಾರಿಗೊಳಿಸಿ, ಇತರ ಎಲ್ಲಾ ದೇಶಗಳ ಮೇಲಿನ ಹೆಚ್ಚುವರಿ ಸುಂಕವನ್ನು 90 ದಿನ ಸ್ಥಗಿತಗೊಳಿಸುವುದಾಗಿ ಆದೇಶಿಸಿದ್ದಾರೆ.
ಚೀನಾವು ಅಸ್ತಿತ್ವದಲ್ಲಿರುವ 20% ಸುಂಕದ ಜೊತೆ ಹೆಚ್ಚುವರಿಯಾಗಿ 125% ಸುಂಕ ಎದುರಿಸಲಿದೆ. ಉಳಿದ ಎಲ್ಲಾ ದೇಶಗಳು 10%ದಷ್ಟು ಮೂಲ ಸುಂಕವನ್ನು ಪಾವತಿಸುತ್ತವೆ ಎಂದು ಶ್ವೇತಭವನದ ರಾಷ್ಟ್ರೀಯ ಆರ್ಥಿಕ ಸಮಿತಿಯ ನಿರ್ದೇಶಕ ಕೆವಿನ್ ಹ್ಯಾಸೆಟ್ ಹೇಳಿದ್ದಾರೆ.