ಗಾಝಾ: ಇಸ್ರೇಲ್ ವೈಮಾನಿಕ ದಾಳಿಯಲ್ಲಿ 7 ಮಕ್ಕಳ ಸಹಿತ 10 ಮಂದಿ ಮೃತ್ಯು

PC : aljazeera.com
ಗಾಝಾ: ದಕ್ಷಿಣ ಗಾಝಾದ ಖಾನ್ ಯೂನಿಸ್ ನಗರದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಇಸ್ರೇಲ್ ವೈಮಾನಿಕ ದಾಳಿಯಲ್ಲಿ 7 ಮಕ್ಕಳ ಸಹಿತ 10 ಮಂದಿ ಮೃತಪಟ್ಟಿರುವುದಾಗಿ ಗಾಝಾದ ನಾಗರಿಕ ರಕ್ಷಣಾ ಏಜೆನ್ಸಿ ವರದಿ ಮಾಡಿದೆ.
ಮಧ್ಯ ಖಾನ್ ಯೂನಿಸ್ ನಲ್ಲಿ ಮನೆಯೊಂದನ್ನು ಗುರಿಯಾಗಿಸಿ ನಡೆದ ವೈಮಾನಿಕ ದಾಳಿಯಲ್ಲಿ 7 ಮಕ್ಕಳ ಸಹಿತ ಒಂದೇ ಕುಟುಂಬದ 10 ಮಂದಿ ಸಾವನ್ನಪ್ಪಿದ್ದು ಇತರ ಹಲವರು ಗಾಯಗೊಂಡಿದ್ದಾರೆ. ಮನೆ ಹಾಗೂ ಅಕ್ಕಪಕ್ಕದ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಗಾಝಾ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಎಎಫ್ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಗುರುವಾರ ಹಾಗೂ ಶುಕ್ರವಾರ ಗಾಝಾದಾದ್ಯಂತ ಸುಮಾರು 40 ಹಮಾಸ್ ಹೋರಾಟಗಾರರ ನೆಲೆಗಳನ್ನು ಕೇಂದ್ರೀಕರಿಸಿ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿ ಹೇಳಿದೆ. ಶುಕ್ರವಾರ ಖಾನ್ ಯೂನಿಸ್ನಲ್ಲಿ ಇಸ್ರೇಲ್ ನ ಟ್ಯಾಂಕ್ಗಳು ದಾಳಿ ತೀವ್ರಗೊಳಿಸಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಮಧ್ಯೆ, ಗಾಝಾ ನಗರದ ಪೂರ್ವ ಭಾಗದ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲ್ ಮಿಲಿಟರಿ ಸೂಚಿಸಿರುವುದಾಗಿ ವರದಿಯಾಗಿದೆ.