ಇಸ್ರೇಲ್ ಭದ್ರತಾ ಮುಖ್ಯಸ್ಥರ ನೇಮಕ ; ನಿರ್ಧಾರ ಬದಲಿಸಿದ ಪ್ರಧಾನಿ ನೆತನ್ಯಾಹು

Update: 2025-04-01 20:50 IST
ಇಸ್ರೇಲ್ ಭದ್ರತಾ ಮುಖ್ಯಸ್ಥರ ನೇಮಕ ; ನಿರ್ಧಾರ ಬದಲಿಸಿದ ಪ್ರಧಾನಿ ನೆತನ್ಯಾಹು

ಬೆಂಜಮಿನ್ ನೆತನ್ಯಾಹು | PC : PTI

  • whatsapp icon

ಜೆರುಸಲೇಂ: ವ್ಯಾಪಕ ಟೀಕೆಯ ಹಿನ್ನೆಲೆಯಲ್ಲಿ ನೌಕಾಪಡೆಯ ಮಾಜಿ ಕಮಾಂಡರ್ ವೈಸ್ ಅಡ್ಮಿರಲ್ ಎಲಿ ಶಾರ್ವಿತ್‍ ರನ್ನು ಭದ್ರತಾ ಏಜೆನ್ಸಿ ಮುಖ್ಯಸ್ಥರನ್ನಾಗಿ ನೇಮಕ ಮಾಡುವ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬದಲಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

`ಕರ್ತವ್ಯ ನಿರ್ವಹಿಸಲು ಸಿದ್ಧ ಎಂಬ ಹೇಳಿಕೆಗಾಗಿ ವೈಸ್ ಅಡ್ಮಿರಲ್ ಶಾರ್ವಿತ್ ಅವರಿಗೆ ಪ್ರಧಾನಿ ಧನ್ಯವಾದ ಸಲ್ಲಿಸಿದ್ದಾರೆ. ಆದರೆ ಹೆಚ್ಚಿನ ಪರಿಶೀಲನೆಯ ನಂತರ ಇತರ ಅಭ್ಯರ್ಥಿಗಳನ್ನು ಪರೀಕ್ಷಿಸಲು ಅವರು ಉದ್ದೇಶಿಸಿದ್ದಾರೆ' ಎಂದು ಪ್ರಧಾನಿ ನೆತನ್ಯಾಹು ಅವರ ಕಚೇರಿಯ ಹೇಳಿಕೆ ತಿಳಿಸಿದೆ. ಭದ್ರತಾ ಏಜೆನ್ಸಿಯ ಹಾಲಿ ನಿರ್ದೇಶಕ ರೊನೆನ್ ಬಾರ್ ಅವರನ್ನು ವಜಾಗೊಳಿಸುವ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್ ಸ್ಥಗಿತಗೊಳಿಸಿದ ಮಧ್ಯೆಯೇ, ಶಾರ್ವಿತ್ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಕಗೊಳಿಸುವ ನಿರ್ಧಾರವನ್ನು ಸೋಮವಾರ ನೆತನ್ಯಾಹು ಘೋಷಿಸಿದ್ದರು. ಬಾರ್ ಅವರನ್ನು ವಜಾಗೊಳಿಸಿರುವುದನ್ನು ವಿರೋಧಿಸಿ ಇಸ್ರೇಲ್‍ ನಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದೆ.

ಶಾರ್ವಿತ್‍ ರನ್ನು ನೇಮಕಗೊಳಿಸುವ ನಿರ್ಧಾರವನ್ನು ಘೋಷಿಸಿದ ಕೆಲ ಗಂಟೆಗಳಲ್ಲೇ, ನೆತನ್ಯಾಹು ಸರಕಾರದ ವಿರುದ್ಧ ನಡೆದಿದ್ದ ಪ್ರತಿಭಟನೆಗಳಲ್ಲಿ ಶಾರ್ವಿತ್ ಪಾಲ್ಗೊಂಡಿದ್ದ ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ನೆತನ್ಯಾಹು ಸರಕಾರದ ನ್ಯಾಯಾಂಗ ಸುಧಾರಣೆ ಪ್ರಯತ್ನಗಳನ್ನು ವಿರೋಧಿಸಿ 2023ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಶಾರ್ವಿತ್ ಕೂಡಾ ಪಾಲ್ಗೊಂಡಿದ್ದರು. ಅಲ್ಲದೆ ನೆತನ್ಯಾಹು ವಿರೋಧಿಸಿದ್ದ ಲೆಬನಾನ್ ಜತೆಗಿನ ಜಲ ಒಪ್ಪಂದವನ್ನು ಶಾರ್ವಿತ್ ಬೆಂಬಲಿಸಿದ್ದರು ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದ್ದವು. ಹವಾಮಾನ ಬದಲಾವಣೆ ಸಮಸ್ಯೆ ಕುರಿತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿಗಳನ್ನು ವಿರೋಧಿಸಿ ಶಾರ್ವಿತ್ ಲೇಖನ ಬರೆದಿರುವುದನ್ನು ಟ್ರಂಪ್ ಬೆಂಬಲಿಗ, ಸೆನೆಟರ್ ಲಿಂಡ್ಸೆ ಗ್ರಹಾಂ ಟೀಕಿಸಿದ್ದರು. ` ಅಧ್ಯಕ್ಷ ಟ್ರಂಪ್‍ಗಿಂತ ಉತ್ತಮ ಬೆಂಬಲಿಗರು ಇಸ್ರೇಲ್ ಗೆ ಎಂದಿಗೂ ಇರಲಿಲ್ಲ. ಅಧ್ಯಕ್ಷ ಟ್ರಂಪ್ ಹಾಗೂ ಅವರ ನೀತಿಗಳ ಬಗ್ಗೆ ಎಲಿ ಶಾರ್ವಿತ್ ಅವರ ಹೇಳಿಕೆಗಳು ಈ ನಿರ್ಣಾಯಕ ಸಂದರ್ಭದಲ್ಲಿ ಅನಗತ್ಯ ಒತ್ತಡ ಸೃಷ್ಟಿಸಲಿವೆ. ಆದ್ದರಿಂದ ಮತ್ತೊಮ್ಮೆ ಪರಿಶೀಲನೆ ನಡೆಸಿ ನಿರ್ಧಾರ ಬದಲಾಯಿಸಬೇಕೆಂದು ನನ್ನ ಇಸ್ರೇಲಿ ಸ್ನೇಹಿತರಿಗೆ ಸಲಹೆ ಮಾಡುತ್ತೇನೆ' ಎಂದು ಗ್ರಹಾಂ ಸೋಮವಾರ `ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News