ಟ್ರಂಪ್ ಸುಂಕ ಆಘಾತದಿಂದ ಜಾಗತಿಕ ವಹಿವಾಟು ಸಮರದ ಭೀತಿ

Photo : PTI
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿತ್ರರಾಷ್ಟ್ರಗಳು ಮತ್ತು ಪ್ರತಿಸ್ಪರ್ಧಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಘೋಷಿಸಿರುವ ಸುಂಕವು ಜಾಗತಿಕ ವಹಿವಾಟು ಸಮರದ ಭೀತಿಗೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಅಮೆರಿಕಕ್ಕೆ ಆಮದಾಗುವ ಎಲ್ಲಾ ಸರಕುಗಳ ಮೇಲೆ ಕನಿಷ್ಠ 10% ದಿಂದ ಗರಿಷ್ಠ 49%ದಷ್ಟು ಸುಂಕ ವಿಧಿಸಲಾಗುವುದು. ಟ್ರಂಪ್ ವಿಧಿಸಿರುವ ಸುಂಕಗಳ ಪಟ್ಟಿಯಲ್ಲಿ 182 ದೇಶಗಳಿವೆ. ಕಾಂಬೋಡಿಯಾದಿಂದ ಆಮದಾಗುವ ಸರಕುಗಳ ಮೇಲೆ 49% ಸುಂಕ ವಿಧಿಸಿರುವುದು ಗರಿಷ್ಠವಾದರೆ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಾಪುರ ಸೇರಿದಂತೆ 118 ದೇಶಗಳ ಆಮದಿನ ಮೇಲೆ 10% ಸುಂಕ ವಿಧಿಸಿರುವುದು ಕನಿಷ್ಠವಾಗಿದೆ. ಫಿಚ್ ರೇಟಿಂಗ್ಸ್ ಪ್ರಕಾರ, 2024ರಲ್ಲಿ 2.5% ಇದ್ದ ಅಮೆರಿಕದ ಪರಿಣಾಮಕಾರಿ ಆಮದು ತೆರಿಗೆ ದರವು ಟ್ರಂಪ್ ಆಡಳಿತದಡಿ 22%ದಷ್ಟು ಏರಿಕೆಯಾಗಿದ್ದು ಈ ಹಿಂದೆ 1910ರಲ್ಲಿಯೂ ಈ ಹಂತಕ್ಕೆ ತಲುಪಿತ್ತು.
ಟ್ರಂಪ್ ಸುಂಕದ ಪರಿಣಾಮ ಬೀಜಿಂಗ್ ಮತ್ತು ಟೋಕಿಯೊ ಸ್ಟಾಕ್ ಮಾರ್ಕೆಟ್ ಇತ್ತೀಚಿನ ತಿಂಗಳಲ್ಲೇ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಯುರೋಪಿಯನ್ ಶೇರುಗಳ ಬೆಲೆಯೂ ತೀವ್ರವಾಗಿ ಕುಸಿದಿದೆ. `ಪರಸ್ಪರ ಸುಂಕಗಳು ಅಮೆರಿಕದ ಸರಕುಗಳ ಮೇಲೆ ಹಾಕಿದ ತೆರಿಗೆ ಹಾಗೂ ತೆರಿಗೆಯೇತರ ಇತರ ಅಡೆತಡೆಗಳಿಗೆ ಪ್ರತಿಕ್ರಮವಾಗಿದೆ. ಹೊಸ ಸುಂಕಗಳು ಅಮೆರಿಕದಲ್ಲಿ ಉತ್ಪಾದನಾ ಉದ್ಯೋಗಗಳನ್ನು ಹೆಚ್ಚಿಸಲಿದೆ. ದಶಕಗಳಿಂದ ನಮ್ಮ ದೇಶವನ್ನು ನಮ್ಮ ನಿಕಟ ಹಾಗೂ ದೂರದ ದೇಶಗಳು ಲೂಟಿ ಮಾಡಿವೆ ಮತ್ತು ಕೊಳ್ಳೆ ಹೊಡೆದಿವೆ' ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.