ವ್ಯಾಪಾರ ಸಮರ: ಚೀನಾ ವಿರುದ್ಧ 104% ಸುಂಕ ಜಾರಿಗೊಳಿಸಿದ ಟ್ರಂಪ್ ಸರ್ಕಾರ

Update: 2025-04-09 10:02 IST
ವ್ಯಾಪಾರ ಸಮರ: ಚೀನಾ ವಿರುದ್ಧ 104% ಸುಂಕ ಜಾರಿಗೊಳಿಸಿದ ಟ್ರಂಪ್ ಸರ್ಕಾರ
  • whatsapp icon

ವಾಷಿಂಗ್ಟನ್: ಚೀನಾದ ವಿರುದ್ಧ ಶೇಕಡ 104ರಷ್ಟು ಸುಂಕವನ್ನು ವಿಧಿಸಲಾಗಿದ್ದು, ಹೊಸ ಸುಂಕವನ್ನು ಏಪ್ರಿಲ್ 9 ರಿಂದಲೇ ಸಂಗ್ರಹಿಸಲಾಗುವುದು ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಪ್ರಕಟಿಸಿದ್ದಾರೆ.

ಚೀನಾ ತನ್ನ ಪ್ರತಿಸುಂಕವನ್ನು ಕಿತ್ತುಹಾಕದ ಹಿನ್ನೆಲೆಯಲ್ಲಿ ಪೌರಾತ್ಯ ಕಾಲಮಾನದ ಪ್ರಕಾರ ಮಧ್ಯಾಹ್ನದಿಂದ ಶೇಕಡ 104ರಷ್ಟು ಹೆಚ್ಚುವರಿ ಸುಂಕ ಜಾರಿಗೆ ಬರಲಿದೆ. ಶೇಕಡ 104ರ ಹೆಚ್ಚುವರಿ ಸುಂಕವನ್ನು ನಾಳೆ ಅಂದರೆ ಏಪ್ರಿಲ್ 9ರಿಂದ ಸಂಗ್ರಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾಗಿ ಫಾಕ್ಸ್ ಬ್ಯುಸಿನೆಸ್ ವರದಿ ಹೇಳಿದೆ.

ಶೇಕಡ 100ಕ್ಕಿಂತ ಅಧಿಕ ಸುಂಕವನ್ನು ಜಾರಿಗೊಳಿಸುವ ಮುನ್ನ ಚೀನಾದ ಪ್ರತಿಕ್ರಿಯೆಯನ್ನು ಕಾದುನೋಡುತ್ತಿರುವುದಾಗಿ ಮಂಗಳವಾರ ಬೆಳಿಗ್ಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಆದರೆ ಚೀನಾ ವ್ಯಾಪಾರ ಒಪ್ಪಂದಗಳ ಬಗ್ಗೆ ಆದ್ಯತೆ ನೀಡದು ಎಂದು ಟ್ರಂಪ್ ಆಡಳಿತದ ಅಧಿಕಾರಿಗಳು ಸ್ಪಷ್ಟಪಡಿಸಿದ್ದರು.

ಡೊನಾಲ್ಡ್ ಟ್ರಂಪ್ ಈಗಾಗಲೇ ಅಮೆರಿಕಕ್ಕೆ ಆಮದಾಗುವ ಬಹುತೇಕ ಎಲ್ಲ ಸರಕುಗಳ ಮೇಲೆ ಶೇಕಡ 10ರಷ್ಟು ಸುಂಕವನ್ನು ವಿಧಿಸಿದ್ದು, ಇದರ ಜತೆಗೆ ಕೆಲ ನಿರ್ದಿಷ್ಟ ಸರಕುಗಳ ಮೇಲೆ ಶೇಕಡ 50ರವರೆಗೂ ಸುಂಕ ವಿಧಿಸಲಾಗಿದ್ದು, ಇದು ಏಪ್ರಿಲ್ 9ರಿಂದ ಜಾರಿಗೆ ಬರಲಿದೆ.

ಅಮೆರಿಕದ ನಿರ್ಧಾರಕ್ಕೆ ಪ್ರತಿಯಾಗಿ ಸುಂಕ ವಿಧಿಸುವ ನಿರ್ಧಾರವನ್ನು ಕಳೆದ ವಾರ ಪ್ರಕಟಿಸಿದ್ದ ಚೀನಾ, ಶೇಕಡ 104ರಷ್ಟು ಸುಂಕ ವಿಧಿಸುವ ಟ್ರಂಪ್ ಬೆದರಿಕೆಗೂ ಜಗ್ಗದೇ, ಅಮೆರಿಕದ ಕ್ರಮವನ್ನು ಬ್ಲ್ಯಾಕ್ಮೇಲ್ ತಂತ್ರ ಎಂದು ಬಣ್ಣಿಸಿತ್ತು. ಈ ಉದ್ವಿಗ್ನತೆಯ ನಡುವೆಯೂ ಟ್ರಂಪ್, ಇನ್ನೂ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಿದೆ ಎಂದು ಪ್ರಸ್ತಾಪ ಮುಂದಿಟ್ಟಿದ್ದರು. "ಚೀನಾ ಕೂಡಾ ಒಪ್ಪಂದ ಮಾಡಿಕೊಳ್ಳಲು ಬಯಸಿದೆ; ಆದರೆ ಹೇಗೆ ಆರಂಭಿಸಬೇಕು ಎನ್ನುವುದು ಅವರಿಗೆ ಗೊತ್ತಿಲ್ಲ. ಅವರ ಕ್ರಮಕ್ಕೆ ನಾವು ಎದುರು ನೋಡುತ್ತಿದ್ದೇವೆ. ಇದು ಆಗಬಹುದು!" ಎಂದು ಅವರು ಜಾಲತಾಣ ಪೋಸ್ಟ್ನಲ್ಲಿ ಹೇಳಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News