ಡೊಮಿನಿಕನ್ ರಿಪಬ್ಲಿಕ್ | ನೈಟ್ ಕ್ಲಬ್‌ನಲ್ಲಿ ಛಾವಣಿ ಕುಸಿತದಲ್ಲಿ ಮೃತರ ಸಂಖ್ಯೆ 79ಕ್ಕೆ ಏರಿಕೆ

Photo | X
ಸ್ಯಾಂಟೊ ಡೊಮಿಂಗೊ: ಡೊಮಿನಿಕನ್ ಗಣರಾಜ್ಯದ ರಾಜಧಾನಿಯಲ್ಲಿ ಮಂಗಳವಾರ ಬೆಳಿಗ್ಗೆ ನೈಟ್ ಕ್ಲಬ್‌ವೊಂದರಲ್ಲಿ ಸಂಭವಿಸಿದ ಛಾವಣಿ ಕುಸಿತದಲ್ಲಿ ಮೃತರ ಸಂಖ್ಯೆ 79ಕ್ಕೆ ಏರಿಕೆಯಾಗಿದ್ದು, 160 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.
ರಾಜಕಾರಣಿಗಳು,ಕ್ರೀಡಾಪಟುಗಳು ಮತ್ತು ಇತರರು ಭಾಗವಹಿಸಿದ್ದ ಅದ್ದೂರಿ ಸಮಾರಂಭದಲ್ಲಿ ಈ ಅವಘಡ ಸಂಭವಿಸಿದೆ. ನೈಟ್‌ಕ್ಲಬ್‌ನ ಅವಶೇಷಗಳಡಿಯಲ್ಲಿ ಬದುಕುಳಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತುರ್ತು ಕಾರ್ಯಾಚರಣೆ ಕೇಂದ್ರದ ನಿರ್ದೇಶಕ ಜುವಾನ್ ಮ್ಯಾನುಯೆಲ್ ಮೆಂಡೆಜ್ ತಿಳಿಸಿದರು.
ನೈಟ್ ಕ್ಲಬ್‌ನಲ್ಲಿ ಜನಪ್ರಿಯ ಗಾಯಕ ರೂಬಿ ಪೆರೆಝ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದ್ದು ಸಾವಿರಾರು ಜನರು ಪಾಲ್ಗೊಂಡಿದ್ದರು. ಈ ವೇಳೆ ಏಕಾಏಕಿ ಪ್ರೇಕ್ಷಕರ ಮೇಲೆ ಛಾವಣಿ ಕುಸಿದಿದೆ. ತಕ್ಷಣ ತುರ್ತು ಕಾರ್ಯಪಡೆಯ 370ಕ್ಕೂ ಅಧಿಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದು ಕಲ್ಲು ಮಣ್ಣಿನ ರಾಶಿಯಡಿ ಸಿಲುಕಿದ್ದ ಹಲವರನ್ನು ರಕ್ಷಿಸಲಾಗಿದೆ. ದುರಂತದ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.