ಟ್ರಂಪ್ ಸುಂಕಾಘಾತ: ಜಾಗತಿಕ ಷೇರು ಮಾರುಕಟ್ಟೆಯಲ್ಲಿ ತಲ್ಲಣ

PC: x.com/htTweets
ನ್ಯೂಯಾರ್ಕ್: ಕೋವಿಡ್-19 ಸಾಂಕ್ರಾಮಿಕದ ಬಳಿಕ ಇದೇ ಮೊದಲ ಬಾರಿಗೆ ಅಮೆರಿಕ ಮತ್ತು ವಿಶ್ವದ ಎಲ್ಲ ಪ್ರಮುಖ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಕಂಡುಬಂದಿದೆ. ವಿಶ್ವದ ಎಲ್ಲ ದೇಶಗಳಿಂದ ಆಗುವ ಆಮದು ಸರಕುಗಳ ಮೇಲೆ ಟ್ರಂಪ್ ಬುಧವಾರ ಭಾರಿ ಸುಂಕ ವಿಧಿಸಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿಯೂ ಷೇರು ಮಾರುಕಟ್ಟೆಯಲ್ಲಿ ಆತಂಕದ ಕಾರ್ಮೋಡ ಕವಿದಿದೆ.
ಯೂರೋಪಿಯನ್ ಮತ್ತು ಏಷ್ಯನ್ ಮಾರುಕಟ್ಟೆಗಳಿಗಿಂತಲೂ ಅಧಿಕವಾಗಿ ಎಸ್ & ಪಿ ಶೇಕಡ 4.8ರಷ್ಟು ಕುಸಿತ ದಾಖಲಿಸಿದೆ. 2020ರ ಕೋವಿಡ್ ಸಾಂಕ್ರಾಮಿಕದ ಅವಧಿಯ ಕುಸಿತದ ಬಳಿಕ ಇದೇ ಮೊದಲ ಬಾರಿಗೆ ಭಾರಿ ಕುಸಿತ ಕಂಡುಬಂದಿದೆ. ಡೋ ಜೋನ್ಸ್ ಕೈಗಾರಿಕಾ ಸರಾಸರಿ 1679 ಪಾಯಿಂಟ್ ಗಳಷ್ಟು ಅಂದರೆ ಶೇಕಡ 4ರಷ್ಟು ಕುಸಿತ ಕಂಡಿದೆ. ನಾಸ್ಡಾಕ್ ಕಾಂಪೋಸಿಟ್ ಶೇಕಡ 6ರಷ್ಟು ಕುಸಿತ ದಾಖಲಿಸಿದೆ.
ಇದು ಆರ್ಥಿಕ ಪ್ರಗತಿಯ ಕುಂಠಿತಕ್ಕೆ ಕಾರಣವಾಗಲಿದೆ ಮತ್ತು ಸುಂಕದ ಕಾರಣದಿಂದ ಹಣದುಬ್ಬರ ಮತ್ತಷ್ಟು ಹೆಚ್ಚಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬೃಹತ್ ತಂತ್ರಜ್ಞಾನ ಉದ್ಯಮದ ಷೇರುಗಳಿಂದ ಹಿಡಿದು ಕಚ್ಚಾ ತೈಲ ಕಂಪನಿಗಳ ವರೆಗಿನ ಎಲ್ಲ ಷೇರುಗಳು ಪತನಗೊಂಡಿವೆ. ಇತರ ಕರೆನ್ಸಿಗಳ ಎದುರು ಅಮೆರಿಕ ಡಾಲರ್ ಗಳ ಮೌಲ್ಯದಲ್ಲೂ ವ್ಯತ್ಯಯ ಕಂಡುಬಂದಿದೆ. ಸುರಕ್ಷಿತ ಹೂಡಿಕೆಯ ಆಯ್ಕೆ ಎಂದು ಪರಿಗಣಿಸಲಾದ ಚಿನ್ನದ ಬೆಲೆ ಗಗನಮುಖಿ ಪ್ರವೃತ್ತಿಯನ್ನು ಹಲವು ದಿನಗಳಿಂದ ಪ್ರದರ್ಶಿಸುತ್ತಿದ್ದರೂ, ಅದರ ಬೆಲೆ ಕೂಡಾ ಗುರುವಾರ ಕುಸಿದಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಅಮೆರಿಕದ ಸಣ್ಣ ಕಂಪನಿಗಳು ಭಾರೀ ಆಘಾತ ಅನುಭವಿಸಿದ್ದು, ಸಣ್ಣ ಷೇರುಗಳ ರಸೆಲ್ ಸೂಚ್ಯಂಕ 2000 ಪಾಯಿಂಟ್ ಗಳಷ್ಟು ಅಂದರೆ ಶೇಕಡ 6.6ರಷ್ಟು ಕುಸಿತ ಕಂಡಿದೆ. ಇದು ಈ ಷೇರುಗಳ ದಾಖಲೆ ಮಟ್ಟಕ್ಕೆ ಹೋಲಿಸಿದರೆ ಶೇಕಡ 20ರಷ್ಟು ಕಡಿಮೆ.