ಗಾಝಾ ಮೇಲೆ ಮುಂದುವರಿದ ಇಸ್ರೇಲ್ ದಾಳಿ: ಕನಿಷ್ಠ 55 ಮಂದಿ ಸಾವು
PC : PTI
ಗಾಝಾ: ಗಾಝಾ ಪಟ್ಟಿಯಾದ್ಯಂತ ಬುಧವಾರ ರಾತ್ರಿಯಿಂದ ಇಸ್ರೇಲ್ ಮುಂದುವರಿಸಿರುವ ದಾಳಿಯಲ್ಲಿ ಕನಿಷ್ಠ 55 ಮಂದಿ ಸಾವನ್ನಪ್ಪಿರುವುದಾಗಿ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಗಾಝಾದಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ವಿಸ್ತರಿಸಲಾಗುವುದು ಮತ್ತು ಗಾಝಾದ ದೊಡ್ಡ ಪ್ರದೇಶಗಳನ್ನು ವಶಪಡಿಸಿಕೊಂಡು ಇಸ್ರೇಲ್ ನ ಭದ್ರತಾ ವಲಯಕ್ಕೆ ಸೇರಿಸಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವರು ಘೋಷಿಸಿದ ಬೆನ್ನಲ್ಲೇ ಈ ದಾಳಿ ನಡೆದಿದೆ.
ಗಾಝಾ ಪಟ್ಟಿಯ ದಕ್ಷಿಣದಲ್ಲಿರುವ ಖಾನ್ ಯೂನಿಸ್ ನಗರದಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಒಂದೇ ಕುಟುಂಬದ 9 ಮಂದಿ ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಐವರು ಮಕ್ಕಳು ಹಾಗೂ ನಾಲ್ವರು ಮಹಿಳೆಯರು ಮೃತರಲ್ಲಿ ಸೇರಿದ್ದಾರೆ. ಖಾನ್ ಯೂನಿಸ್ನಲ್ಲಿ ನಡೆದ ಪ್ರತ್ಯೇಕ ದಾಳಿಯಲ್ಲಿ ಐವರು ಮಕ್ಕಳು, ಗರ್ಭಿಣಿ ಮಹಿಳೆ ಸೇರಿದಂತೆ 19 ಮಂದಿ ಸಾವನ್ನಪ್ಪಿದ್ದಾರೆ. ಗಾಝಾ ನಗರದಲ್ಲಿ 21 ಮಂದಿಯ ಮೃತದೇಹಗಳನ್ನು ಅಹ್ಲಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ. ಈ ಮಧ್ಯೆ, ಇಸ್ರೇಲ್ ಸೇನೆ ಶುಜೈಯ, ಜಾಡಿಡಾ, ತುರ್ಕೊಮೆನ್ ಮತ್ತು ಪೂರ್ವ ಜೇಟನ್ನ ನಿವಾಸಿಗಳು ಗಾಝಾ ನಗರದ ಪಶ್ಚಿಮದಲ್ಲಿರುವ ಶಿಬಿರಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಿರುವುದಾಗಿ ವರದಿಯಾಗಿದೆ.