ಅಮೆರಿಕ ಜತೆ ಪರೋಕ್ಷ ಮಾತುಕತೆಗೆ ಇರಾನ್ ಒಲವು; ದಾಳಿ ನಡೆದರೆ ಬೆಂಬಲಿಸದಂತೆ ನೆರೆಯ ದೇಶಗಳಿಗೆ ಎಚ್ಚರಿಕೆ

PC : NDTV
ಟೆಹ್ರಾನ್: ಪರಮಾಣು ಕಾರ್ಯಕ್ರಮಗಳ ಬಗ್ಗೆ ನೇರ ಮಾತುಕತೆ ನಡೆಸದಿದ್ದರೆ ಬಾಂಬ್ ದಾಳಿ ನಡೆಸುವುದಾಗಿ ಅಮೆರಿಕ ನೀಡಿದ ಎಚ್ಚರಿಕೆಯನ್ನು ವಿರೋಧಿಸಿರುವ ಇರಾನ್, ಪರೋಕ್ಷ ಮಾತುಕತೆ ಮುಂದುವರಿಸಲು ಬಯಸಿದೆ ಎಂದು ವರದಿಯಾಗಿದೆ.
ಇರಾನ್ ಮೇಲಿನ ಸಂಭಾವ್ಯ ದಾಳಿಯ ಸಂದರ್ಭ ಅಮೆರಿಕದ ಸೇನಾ ನೆಲೆಗೆ ಆತಿಥ್ಯ ವಹಿಸಿರುವ ನೆರೆಹೊರೆಯ ದೇಶಗಳು ಬೆಂಬಲ ನೀಡಬಾರದು ಎಂದು ಇರಾನ್ ಎಚ್ಚರಿಕೆ ನೀಡಿದೆ.
ಒಮಾನ್ ಮೂಲಕ ಮಾತುಕತೆ ಮುಂದುವರಿಸಲು ಇರಾನ್ ಬಯಸಿದೆ. ಇರಾನ್ ಜೊತೆಗಿನ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳುವುದನ್ನು ಅಮೆರಿಕ ಎಷ್ಟು ಗಂಭೀರವಾಗಿ ಪರಿಗಣಿಸಿದೆ ಎಂಬುದನ್ನು ಮೌಲ್ಯಮಾಪನ ಮಾಡಲು ಪರೋಕ್ಷ ಮಾತುಕತೆ ಉತ್ತಮ ವಿಧಾನವಾಗಿದೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ.
ಇದೇ ವೇಳೆ, ಇರಾನ್ ಮೇಲೆ ಅಮೆರಿಕದ ದಾಳಿಯ ಸಂದರ್ಭ ಯಾವುದೇ ನೆರವು ನೀಡುವುದನ್ನು (ತಮ್ಮ ವಾಯು ಪ್ರದೇಶ ಅಥವಾ ಭೂಪ್ರದೇಶವನ್ನು ಬಳಸಲು ಅವಕಾಶ ನೀಡುವುದು ಸೇರಿದಂತೆ) ಹಗೆತನದ ಕೃತ್ಯ ಎಂದು ಪರಿಗಣಿಸುವುದಾಗಿ ಇರಾಕ್, ಕುವೈಟ್, ಯುಎಇ, ಖತರ್, ಟರ್ಕಿ ಮತ್ತು ಬಹ್ರೇನ್‍ಗೆ ಇರಾನ್ ನೋಟಿಸ್ ಜಾರಿಗೊಳಿಸಿದೆ.
ಇಂತಹ ಚಟುವಟಿಕೆಗಳು ತೀವ್ರ ಪರಿಣಾಮಕ್ಕೆ ಕಾರಣವಾಗಲಿದೆ. ಇರಾನ್ ನ ಪರಮೋಚ್ಛ ನಾಯಕ ಅಯತುಲ್ಲಾ ಆಲಿ ಖಾಮಿನೈ ದೇಶದ ಸಶಸ್ತ್ರ ಪಡೆಗಳನ್ನು ಕಟ್ಟೆಚ್ಚರದಲ್ಲಿ ಇರಿಸಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.