ಅಗ್ನಿ ಅವಘಡದಲ್ಲಿ ಮಕ್ಕಳ ರಕ್ಷಣೆಗೆ ನೆರವು: ನಾಲ್ವರು ಭಾರತೀಯರನ್ನು ಸನ್ಮಾನಿಸಿದ ಸಿಂಗಾಪುರ ಸರಕಾರ

Credit: Facebook/Singapore Ministry of Manpower
ಸಿಂಗಪೂರ್: ಅಂಗಡಿ ಮಳಿಗೆಯೊಂದರಲ್ಲಿ ಸಂಭವಿಸಿದ್ದ ಅಗ್ನಿ ಅವಘಡದ ವೇಳೆ ಅಂಗಡಿಯೊಳಗೆ ಸಿಲುಕಿಕೊಂಡಿದ್ದ ಆರು ಮಂದಿ ಯುವಕರು ಹಾಗೂ 16 ಮಂದಿ ಅಪ್ರಾಪ್ತರನ್ನು ರಕ್ಷಿಸುವಲ್ಲಿ ವೀರೋಚಿತ ನೆರವು ನೀಡಿದ್ದನ್ನು ಪರಿಗಣಿಸಿ, ಶುಕ್ರವಾರ ನಾಲ್ವರು ಭಾರತೀಯ ವಲಸೆ ಕಾರ್ಮಿಕರನ್ನು ಸಿಂಗಾಪುರ ಸರಕಾರ ಸನ್ಮಾನಿಸಿದೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅಗ್ನಿ ಅವಘಡದಲ್ಲಿ ಸಿಲುಕಿಕೊಂಡಿದ್ದ ಸಂತ್ರಸ್ತರನ್ನು ರಕ್ಷಿಸಿದ್ದಕ್ಕಾಗಿ ಸಿಂಗಾಪುರ ಸರಕಾರದಿಂದ ಇಂದರ್ ಜಿತ್ ಸಿಂಗ್, ಸುಬ್ರಮಣಿಯನ್ ಶರಣ್ ರಾಜ್, ನಾಗರಾಜನ್ ಅಂಬರಸನ್ ಹಾಗೂ ಶಿವಸಾಮಿ ವಿಜಯರಾಜ್ ‘ಫ್ರೆಂಡ್ಸ್ ಆಫ್ ಎಸಿಇ’ ನಾಣ್ಯಗಳನ್ನು ಸ್ವೀಕರಿಸಿದರು.
ಈ ಕುರಿತು ಪ್ರಕಟಣೆ ಬಿಡುಗಡೆ ಮಾಡಿರುವ ಸಿಂಗಾಪುರ ಮಾನವ ಸಂಪನ್ಮೂಲ ಸಚಿವಾಲಯ, “ಅವರ ಕ್ಷಿಪ್ರ ಯೋಚನೆ ಹಾಗೂ ಧೈರ್ಯ ಎಲ್ಲವನ್ನೂ ಬದಲಿಸಿತು. ತುರ್ತು ಸಮಯದಲ್ಲಿ ನೆರವಿಗೆ ಒದಗಿ ಬರುವ ಸಮುದಾಯದ ಶಕ್ತಿಯನ್ನು ನೆನಪಿಸಿದ್ದಕ್ಕಾಗಿ ನಿಮಗೆ ಧನ್ಯವಾದಗಳು” ಎಂದು ಹೇಳಿದೆ ಎಂದು ಶುಕ್ರವಾರದ ವಾರಪತ್ರಿಕೆ ‘Tabla’ ವರದಿ ಮಾಡಿದೆ.
ಮಕ್ಕಳ ಕಿರುಚಾಟ ಕೇಳಿ ಹಾಗೂ ಮೂರನೆಯ ಅಂತಸ್ತಿನಲ್ಲಿದ್ದ ಅಂಗಡಿ ಮಳಿಗೆಯ ಕಿಟಕಿಯಿಂದ ದಟ್ಟ ಹೊಗೆ ಹೊರ ಬರುತ್ತಿರುವುದನ್ನು ಗಮನಿಸಿದ ಈ ನಾಲ್ವರು ವಲಸೆ ಕಾರ್ಮಿಕರು, ಕ್ಷಣ ಮಾತ್ರವೂ ಸಮಯವನ್ನು ವ್ಯರ್ಥ ಮಾಡದೆ, ತಾವು ಕೆಲಸ ನಿರ್ವಹಿಸುತ್ತಿದ್ದ ಎದುರಿನ ಕಟ್ಟಡದಲ್ಲಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗಲಿದ್ದ ಸಂತ್ರಸ್ತರನ್ನು ರಕ್ಷಿಸಿದ್ದರು.
ಅಗ್ನಿ ಅವಘಡಕ್ಕೆ ತುತ್ತಾಗಿದ್ದ ಅಂಗಡಿ ಮಳಿಗೆಯೊಳಗೆ ಸಿಲುಕಿದ್ದ ಮಕ್ಕಳ ಬಳಿಗೆ ತಲುಪಲು ಈ ನಾಲ್ವರು ಏಣಿಯನ್ನು ಬಳಸಿಕೊಂಡಿದ್ದರು.
ಎಪ್ರಿಲ್ 8ರಂದು ಸಂಭವಿಸಿದ್ದ ಈ ಅಗ್ನಿ ಅವಘಡದಲ್ಲಿ ಪಾರಾಗಿದ್ದ ವ್ಯಕ್ತಿಗಳ ಪೈಕಿ ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ 8 ವರ್ಷದ ಪುತ್ರ ಮಾರ್ಕ್ ಶಂಕರ್ ಪವನೋವಿಚ್ ಕೂಡಾ ಸೇರಿದ್ದನು. ಈ ವೇಳೆ ಆತ ಅಂಗಡಿ ಮಳಿಗೆಯಲ್ಲಿನ ಪಾಕಶಾಲೆಯೊಳಗಿದ್ದ ಎನ್ನಲಾಗಿದೆ.
ಈ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದ 10 ವರ್ಷದ ಆಸ್ಟ್ರೇಲಿಯ ಬಾಲಕಿ, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.