ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ತಾತ್ಕಾಲಿಕವಾಗಿ ವೀಸಾ ಸ್ಥಗಿತಗೊಳಿಸಿದ ಸೌದಿ ಅರೇಬಿಯಾ

ಸಾಂದರ್ಭಿಕ ಚಿತ್ರ (PTI)
ರಿಯಾದ್: ಸೌದಿ ಅರೇಬಿಯಾ ಹಜ್ ಯಾತ್ರೆಗೆ ಮುಂಚಿತವಾಗಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಹಜ್ ಯಾತ್ರೆ ಹಿನ್ನೆಲೆ ಜನಸಂದಣಿಯನ್ನು ನಿಯಂತ್ರಿಸುವ ಪ್ರಯತ್ನಗಳ ಭಾಗವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಹಜ್ ಯಾತ್ರೆಯು ಮುಕ್ತಾಯಗೊಳ್ಳುವವರೆಗೆ ಅಂದರೆ ಜೂನ್ ಮಧ್ಯದವರೆಗೆ ನಿಷೇಧವು ಜಾರಿಯಲ್ಲಿರಲಿದೆ.
ಸೌದಿ ಅರೇಬಿಯಾ ಉಮ್ರಾ, ವ್ಯಾಪಾರ ಮತ್ತು ಕೌಟುಂಬಿಕ ವೀಸಾಗಳನ್ನು ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ನೋಂದಣಿ ಇಲ್ಲದ ವ್ಯಕ್ತಿಗಳು ಹಜ್ ನಿರ್ವಹಿಸಲು ಪ್ರಯತ್ನಿಸುವುದನ್ನು ತಡೆಯಲು, ಜನಸಂದಣಿಯನ್ನು ನಿಯಂತ್ರಿಸಲು, ಹಜ್ ವೇಳೆ ಕಾಲ್ತುಳಿತದಂತಹ ಘಟನೆಯನ್ನು ತಪ್ಪಿಸಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸೌದಿ ಅಧಿಕಾರಿಗಳು ಹೇಳಿದರು.
ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಅವರು ವೀಸಾ ನಿಯಮಾವಳಿಗಳನ್ನು ಬಿಗಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಪರಿಷ್ಕೃತ ನಿಯಮಗಳ ಪ್ರಕಾರ ಈ ವರ್ಷ ಉಮ್ರಾ ವೀಸಾಕ್ಕೆ ಅರ್ಜಿ ಸಲ್ಲಿಸಲು ಎಪ್ರಿಲ್ 13, 2025 ಕೊನೆಯ ದಿನವಾಗಿದೆ. ಆ ಬಳಿಕ ಹಜ್ ಮುಕ್ತಾಯದವರೆಗೆ ಯಾವುದೇ ಹೊಸ ಉಮ್ರಾ ವೀಸಾಗಳನ್ನು ನೀಡಲಾಗುವುದಿಲ್ಲ.
ಸೌದಿ ಅರೇಬಿಯಾ ಈ ಕೆಳಗಿನ ದೇಶಗಳಿಗೆ ತಾತ್ಕಾಲಿಕವಾಗಿ ವೀಸಾವನ್ನು ನಿಷೇಧಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ಈಜಿಪ್ಟ್, ಇಂಡೋನೇಷ್ಯಾ, ಇರಾಕ್, ನೈಜೀರಿಯಾ, ಜೋರ್ಡಾನ್, ಅಲ್ಜೀರಿಯಾ, ಸುಡಾನ್, ಇಥಿಯೋಪಿಯಾ, ಟುನೀಶಿಯಾ, ಯೆಮೆನ್ ದೇಶಗಳಿಗೆ ತಾತ್ಕಾಲಿಕವಾಗಿ ವೀಸಾ ನಿಷೇಧವನ್ನು ಹೇರಿದೆ.
ಇದಲ್ಲದೆ ಯಾತ್ರಾರ್ಥಿಗಳಿಗೆ ಸಹಾಯ ಮತ್ತು ಅರಿವನ್ನು ನೀಡುವ ದೃಷ್ಟಿಯಿಂದ ಸೌದಿ ಅಧಿಕಾರಿಗಳು 16 ಭಾಷೆಗಳಲ್ಲಿ ಡಿಜಿಟಲ್ ಹಜ್ ಮತ್ತು ಉಮ್ರಾ ಮಾರ್ಗದರ್ಶವನ್ನು ಬಿಡುಗಡೆ ಮಾಡಿದ್ದಾರೆ. ಹಜ್ ಸಮಯದಲ್ಲಿ ಸೌದಿಯಲ್ಲಿ ಅಕ್ರಮವಾಗಿ ವಾಸವಿದ್ದರೆ ಅಂತಹ ವ್ಯಕ್ತಿಗಳಿಗೆ ಸೌದಿ ಅರೇಬಿಯಾ ಪ್ರವೇಶಕ್ಕೆ ಐದು ವರ್ಷಗಳ ನಿಷೇಧ ಮತ್ತು SAR 10,000 ರೂ (2,28,547ರೂ.) ದಂಡವನ್ನು ವಿಧಿಸಲಾಗುತ್ತದೆ ಎಂದು Gulf News ವರದಿ ಮಾಡಿದೆ.