ಅಮೆರಿಕ: 10% ಟ್ರಂಪ್ ಸುಂಕ ಸಂಗ್ರಹ ಆರಂಭ

ಡೊನಾಲ್ಡ್ ಟ್ರಂಪ್ | PTI
ವಾಷಿಂಗ್ಟನ್: ಅಮೆರಿಕದ ಕಸ್ಟಮ್ಸ್ ಏಜೆಂಟರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಏಕಪಕ್ಷೀಯ 10%ದಷ್ಟು ಸುಂಕವನ್ನು ಅನೇಕ ದೇಶಗಳಿಂದ ಶನಿವಾರ ಸಂಗ್ರಹಿಸಲು ಪ್ರಾರಂಭಿಸಿದ್ದಾರೆ ಎಂದು ವರದಿಯಾಗಿದೆ.
57 ದೊಡ್ಡ ವ್ಯಾಪಾರ ಪಾಲುದಾರರಿಂದ ಸರಕುಗಳ ಮೇಲಿನ ಹೆಚ್ಚುವರಿ ಸುಂಕ ಸಂಗ್ರಹ ಮುಂದಿನ ವಾರ ಆರಂಭಗೊಳ್ಳುತ್ತದೆ. ಅಮೆರಿಕದ ಆಮದುದಾರರು ಪಾವತಿಸುವ 10% `ಬೇಸ್‍ಲೈನ್ ಸುಂಕವು' ಸ್ಥಳೀಯ ಕಾಲಮಾನ ಶುಕ್ರವಾರ ಮಧ್ಯರಾತ್ರಿ 12 ಗಂಟೆಯ ಬಳಿಕ ಅಮೆರಿಕದ ಬಂದರುಗಳು, ವಿಮಾನ ನಿಲ್ದಾಣಗಳು ಮತ್ತು ಕಸ್ಟಮ್ಸ್ ಗೋದಾಮುಗಳಲ್ಲಿ ಜಾರಿಗೆ ಬಂದಿದೆ. ಇದು ನಮ್ಮ ಜೀವಿತಾವಧಿಯ ಏಕೈಕ ಅತೀ ದೊಡ್ಡ ವ್ಯಾಪಾರ ಕ್ರಮವಾಗಿದೆ' ಎಂದು ಟ್ರಂಪ್ ಅವರ ಮೊದಲನೇ ಅಧಿಕಾರಾವಧಿಯಲ್ಲಿ ಶ್ವೇತಭವನದ ವ್ಯಾಪಾರ ಸಲಹೆಗಾರರಾಗಿದ್ದ ಕೆಲ್ಲೀ ಶಾ ಹೇಳಿದ್ದಾರೆ.
ಆಸ್ಟ್ರೇಲಿಯಾ, ಬ್ರಿಟನ್, ಬ್ರೆಝಿಲ್, ಕೊಲಂಬಿಯಾ, ಅರ್ಜೆಂಟೀನಾ ಮತ್ತು ಸೌದಿ ಅರೆಬಿಯಾಗಳು 10% ಸುಂಕದ ಪಟ್ಟಿಯಲ್ಲಿವೆ.
ಟ್ರಂಪ್ ಘೋಷಿಸಿದ ಹೊಸ ಸುಂಕವು ಜಾಗತಿಕ ವ್ಯಾಪಾರ ಸಮರಕ್ಕೆ ಕಾರಣವಾಗಬಹುದು ಎಂಬ ಭೀತಿಯ ನಡುವೆಯೇ ಕೆಲವು ದೇಶಗಳು ಟ್ರಂಪ್ ಜೊತೆ ಮಾತುಕತೆ ನಡೆಸಿ ಸುಂಕದ ಬಿಸಿ ತಗ್ಗಿಸುವ ಪ್ರಯತ್ನಕ್ಕೆ ಮುಂದಾಗಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸೋಮವಾರ ಅಮೆರಿಕಾಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಇಸ್ರೇಲ್ ಮೇಲೆ ಟ್ರಂಪ್ 17% ಸುಂಕ ವಿಧಿಸಿದ್ದಾರೆ. ಅಮೆರಿಕದ ಜೊತೆ ಮಾತುಕತೆಗೆ ವಿಯೆಟ್ನಾಂ (46% ಸುಂಕ) ಶುಕ್ರವಾರ ಒಪ್ಪಿದ್ದರೆ ತೈವಾನ್ ನ (32% ಸುಂಕ) ನಿಯೋಗವೂ ಟ್ರಂಪ್ ರನ್ನು ಭೇಟಿಯಾಗಲು ಅಮೆರಿಕ ತಲುಪಿರುವುದಾಗಿ ವರದಿಯಾಗಿದೆ.