ಅಮೆರಿಕದಿಂದ ಆರ್ಥಿಕ ದಬ್ಬಾಳಿಕೆ: ಚೀನಾ ಆರೋಪ

Photo Credit | PTI
ಬೀಜಿಂಗ್ : ಅಮೆರಿಕವು ಸುಂಕದ ಮೂಲಕ ಏಕಪಕ್ಷೀಯ ಕ್ರಮ, ರಕ್ಷಣಾವಾದ ಮತ್ತು ಆರ್ಥಿಕ ದಬ್ಬಾಳಿಕೆ ನಡೆಸುತ್ತಿದೆ ಎಂದು ಚೀನಾ ಸೋಮವಾರ ಆರೋಪಿಸಿದ್ದು ಅವರ ಕಾರ್ಯಗಳು ಜಾಗತಿಕ ಆರ್ಥಿಕ ಚೇತರಿಕೆಗೆ ಗಂಭೀರ ಹಾನಿ ಎಸಗುತ್ತದೆ ಎಂದು ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ವ್ಯವಹಾರ ಇಲಾಖೆಯ ವಕ್ತಾರೆ ಲಿನ್ ಜಿಯಾನ್ `ಅಮೆರಿಕ ಮೊದಲು' ಎಂಬ ನೀತಿಯ ಮೂಲಕ ಇತರ ದೇಶಗಳಿಗೆ(ವಿಶೇಷವಾಗಿ ಜಾಗತಿಕ ದಕ್ಷಿಣದ ಅಭಿವೃದ್ಧಿಶೀಲ ದೇಶಗಳಿಗೆ) ಹಾನಿಯೆಸಗಿ ತಮ್ಮ ಹಿತಾಸಕ್ತಿಯನ್ನು ರಕ್ಷಿಸುವುದು ಟ್ರಂಪ್ ಉದ್ದೇಶವಾಗಿದೆ. ಅಮೆರಿಕ ಮೊದಲು ಎಂಬ ನೀತಿ ಅಂತರಾಷ್ಟ್ರೀಯ ನಿಯಮಗಳಿಗಿಂತಲೂ ಮೇಲೆ ಎಂದು ಭಾವಿಸುವುದು ಜಾಗತಿಕ ಉತ್ಪಾದನೆ ಮತ್ತು ಪೂರೈಕೆ ಸರಪಳಿಯ ಸ್ಥಿರತೆಗೆ ಹಾನಿ ಮಾಡುತ್ತದೆ ಮತ್ತು ವಿಶ್ವದ ಆರ್ಥಿಕ ಚೇತರಿಕೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ. ಅಮೆರಿಕದಿಂದ ಸುಂಕದ ದುರುಪಯೋಗವು ವಂಚಿತ ದೇಶಗಳಿಗೆ, ವಿಶೇಷವಾಗಿ ಜಾಗತಿಕ ದಕ್ಷಿಣದಲ್ಲಿರುವ ದೇಶಗಳ ಅಭಿವೃದ್ಧಿಯ ಹಕ್ಕನ್ನು ನಿರಾಕರಿಸುತ್ತದೆ ಎಂದು ಹೇಳಿದ್ದಾರೆ.
ಒತ್ತಡ ಮತ್ತು ಬೆದರಿಕೆ ಚೀನಾದೊಂದಿಗೆ ವ್ಯವಹರಿಸುವ ಮಾರ್ಗವಲ್ಲ. ಚೀನಾವು ತನ್ನ ಕಾನೂನುಬದ್ಧ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ದೃಢವಾಗಿ ರಕ್ಷಿಸುತ್ತದೆ ಎಂದು ಲಿನ್ ಜಿಯಾನ್ ಹೇಳಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ಚೀನಾದ ಸರಕುಗಳ ಮೇಲೆ 10% ಸುಂಕ ಘೋಷಿಸಿದ್ದ ಟ್ರಂಪ್, ಕಳೆದ ವಾರ 34% ಹೆಚ್ಚುವರಿ ಸುಂಕ ಜಾರಿಗೊಳಿಸಿದ್ದರು. ಇದಕ್ಕೆ ಪ್ರತಿಯಾಗಿ ಚೀನಾವು ಅಮೆರಿಕದ ಸರಕುಗಳ ಮೇಲೆ 34% ಸುಂಕ ಜಾರಿಗೊಳಿಸಿದೆ. ಅಮೆರಿಕ-ಚೀನಾ ಸುಂಕ ಸಮರದ ಭೀತಿಯ ಹಿನ್ನೆಲೆಯಲ್ಲಿ ಬೀಜಿಂಗ್ ಮತ್ತು ಶಾಂಘೈನಲ್ಲಿ ಮಾರುಕಟ್ಟೆಗಳು ತತ್ತರಿಸಿವೆ. ಆದರೆ ಅಮೆರಿಕದ ಅಧಿಕ ಸುಂಕದ ಪ್ರಹಾರವನ್ನು ತಾಳಿಕೊಳ್ಳುವ ಸಾಮಥ್ರ್ಯ ಚೀನಾಕ್ಕೆ ಇದೆ ಎಂದು ಚೀನಾದ `ಪೀಪಲ್ಸ್ ಡೈಲಿ' ಪತ್ರಿಕೆ ವಿಶ್ವಾಸ ವ್ಯಕ್ತಪಡಿಸಿದೆ. `ಆಕಾಶವೇನೂ ಕುಸಿದು ಬೀಳದು. ಅಮೆರಿಕನ್ ತೆರಿಗೆಗಳ ವಿವೇಚನೆಯಿಲ್ಲದ ಹೊಡೆತಗಳನ್ನು ಎದುರಿಸುತ್ತಿದ್ದೇವೆ. ನಾವು ಏನು ಮಾಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ ಮತ್ತು ಅದಕ್ಕೆ ಸರಿಯಾದ ಸಾಧನಗಳು ನಮ್ಮಲ್ಲಿವೆ' ಎಂದು ಪತ್ರಿಕೆ ಹೇಳಿದೆ.
ಈ ಮಧ್ಯೆ, ವಾರಾಂತ್ಯದಲ್ಲಿ ಅಮೆರಿಕದ 20 ಕಂಪೆನಿಗಳ ಮುಖ್ಯಸ್ಥರೊಂದಿಗೆ ಚೀನಾದ ವಾಣಿಜ್ಯ ಇಲಾಖೆಯ ಸಹಾಯಕ ಸಚಿವ ಲಿಂಗ್ ಜಿ ನೇತೃತ್ವದ ನಿಯೋಗ ಸಭೆ ನಡೆಸಿದೆ. `ಸುಂಕ ಸಮಸ್ಯೆಯ ಬೇರು ಅಮೆರಿಕದಲ್ಲಿದೆ. ಆದ್ದರಿಂದ ಅಮೆರಿಕದ ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಿ ಜಾಗತಿಕ ಪೂರೈಕೆ ಸರಪಳಿಯ ಸ್ಥಿರತೆಯ ಸಂರಕ್ಷಣೆಗೆ ಒಗ್ಗೂಡಬೇಕು' ಎಂದು ಲಿಂಗ್ ಜಿ ಸಭೆಯಲ್ಲಿ ಆಗ್ರಹಿಸಿದರು ಎಂದು ರಾಯ್ಟರ್ಸ್ ವರದಿ ಮಾಡಿದೆ.