ಅಮೆರಿಕದಲ್ಲಿ ಸುಂಟರಗಾಳಿ, ಧಾರಾಕಾರ ಮಳೆಗೆ ಇಬ್ಬರು ಸಾವು; 8 ಮಂದಿಗೆ ಗಾಯ
ವಾಷಿಂಗ್ಟನ್, ಎ.3: ಮಧ್ಯ ಮತ್ತು ದಕ್ಷಿಣ ಅಮೆರಿಕದಲ್ಲಿ ಸುಂಟರಗಾಳಿ ಹಾಗೂ ಧಾರಾಕಾರ ಮಳೆಯಿಂದ ಉಂಟಾದ ಭೀಕರ ಪ್ರವಾಹಕ್ಕೆ ಇಬ್ಬರು ಬಲಿಯಾಗಿದ್ದು 8 ಮಂದಿ ಗಾಯಗೊಂಡಿರುವುದಾಗಿ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ.
ಟೆನ್ನೆಸ್ಸೀ, ಮಿಸಿಸಿಪ್ಪಿ, ಟೆಕ್ಸಾಸ್, ಮಿಚಿಗನ್ ರಾಜ್ಯಗಳಲ್ಲಿ ಮಳೆ ಮುಂದುವರಿಯಲಿದ್ದು ಪ್ರವಾಹ ತೀವ್ರಗೊಳ್ಳಲಿದೆ ಎಂದು ರಾಷ್ಟ್ರೀಯ ಹವಾಮಾನ ಸೇವೆ ಎಚ್ಚರಿಕೆ ನೀಡಿದೆ. ಓಹಿಯೊದಿಂದ ಮಿಸಿಸಿಪ್ಪಿವರೆಗೆ ಸುಮಾರು 15 ದಶಲಕ್ಷ ಜನರು, ನ್ಯಾಶ್ವಿಲ್ಲೆ, ಟೆನ್ನೆಸ್ಸೀ, ಟ್ಯುಪೆಲೊ, ಮಿಸಿಸಿಪ್ಪಿಯ ಸುಮಾರು 6 ದಶಲಕ್ಷ ಜನರು ಸುಂಟರಗಾಳಿಯ ಅಪಾಯ ಎದುರಿಸುತ್ತಿದ್ದು ಈ ಪ್ರದೇಶದಲ್ಲಿ ಗಂಟೆಗೆ 75 ಮೈಲು ವೇಗದ ಬಿರುಗಾಳಿಯಿಂದ ಕೂಡಿದ ಮಳೆಯಾಗಿದೆ. ಇಂಡಿಯಾನಾದಲ್ಲಿ ರೇಡಿಯೊ ಗೋಪುರವೊಂದು ನೆಲಕ್ಕುರುಳಿದ್ದರೆ, ಇಂಡಿಯಾನಪೊಲಿಸ್ನಲ್ಲಿ ಹಲವು ವಾಹನಗಳು ಜಲಾವೃತಗೊಂಡಿವೆ. ಅರ್ಕಾನ್ಸಾದಲ್ಲಿ ಹಲವು ಮನೆಗಳು ಹಾನಿಗೊಂಡರೆ, ಇಂಡಿಯಾನಾ, ಅರ್ಕಾನ್ಸಾಸ್, ಮಿಸ್ಸೌರಿ ಮತ್ತು ಮಿಸಿಸಿಪ್ಪಿಯಲ್ಲಿ 2 ಲಕ್ಷಕ್ಕೂ ಅಧಿಕ ಗ್ರಾಹಕರಿಗೆ ವಿದ್ಯುತ್ ಪೂರೈಕೆ ಮೊಟಕುಗೊಂಡಿದ್ದು ವ್ಯಾಪಕ ನಾಶ-ನಷ್ಟ ಸಂಭವಿಸಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.