ಸಂಘರ್ಷ ಪುನಾರಂಭಗೊಂಡ ಬಳಿಕ ಗಾಝಾದಲ್ಲಿ ಪ್ರತಿದಿನ 100 ಮಕ್ಕಳು ಮೃತ್ಯು: ವಿಶ್ವಸಂಸ್ಥೆ

PC : unicef.org
ವಿಶ್ವಸಂಸ್ಥೆ: ಇಸ್ರೇಲ್ ಸೇನೆಯು ಮಾರ್ಚ್ 18ರಂದು ದಾಳಿಯನ್ನು ಪುನಾರಂಭಿಸಿದಾಗಿನಿಂದ ಗಾಝಾದಲ್ಲಿ ಪ್ರತಿ ದಿನವೂ ಕನಿಷ್ಠ 100 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ ಇಲ್ಲವೇ ಗಾಯಗೊಂಡಿದ್ದಾರೆ ಎಂದು ವಿಶ್ವಸಂಸ್ಥೆ ಶನಿವಾರ ಕಳವಳ ವ್ಯಕ್ತಪಡಿಸಿದೆ.
‘‘ಈ ಮಕ್ಕಳ ಹತ್ಯೆಯನ್ನು ಯಾವುದೇ ಕಾರಣಕ್ಕೂ ಸಮರ್ಥಿಸಲು ಸಾಧ್ಯವಿಲ್ಲ’’ ಎಂದು ಫೆಲೆಸ್ತೀನ್ ನಿರಾಶ್ರಿತರಿಗಾಗಿನ ವಿಶ್ವಸಂಸ್ಥೆ ಏಜೆನ್ಸಿಯ ವರಿಷ್ಠ ಫಿಲಿಪ್ಪೆ ಲಾಝ್ಝಾರಿನಿ ಅವರು ಶನಿವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಸ್ರೇಲ್ ಸೇನೆಯ ದಿಗ್ಬಂಧನದಲ್ಲಿರುವ ಗಾಝಾ ಪ್ರಾಂತವನ್ನು ‘ಮಕ್ಕಳಿಲ್ಲದ ನೆಲ’ವಾಗಿ ಇಸ್ರೇಲ್ ಪರಿವರ್ತಿಸುತ್ತಿದೆ ಯುದ್ಧದಲ್ಲಿ ಎಳೆಯ ಜೀವಗಳು ಬಲಿಯಾಗುತ್ತಿವೆ. ಈ ಹತ್ಯಾಕಾಂಡವು ಸಾರ್ವತ್ರಿಕ ಮಾನವೀಯತೆಗೆ ಹಚ್ಚಿದ ಕಳಂಕವಾಗಿದೆ ಎಂದು ಲಾಝ್ಝಾರಾನಿ ಆಘಾತ ವ್ಯಕ್ತಪಡಿಸಿದ್ದಾರೆ.
ಜನವರಿ 19ರಂದು ಏರ್ಪಟ್ಟಿದ್ದ ಕದನವಿರಾಮ ಮುರಿದುಬಿದ್ದ ಬಳಿಕ ಮಾರ್ಚ್ 18ರಂದು ಇಸ್ರೇಲ್ ದಾಳಿಯನ್ನು ಪುನಾರಂಭಿಸಿದಾಗಿನಿಂದ ಕನಿಷ್ಠ 322 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆಂದು ವಿಶ್ವಸಂಸ್ಥೆಯ ಮಕ್ಕಳ ನಿಧಿ ಸಂಸ್ಥೆ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ.