ಹೌದಿಗಳ ವಿರುದ್ಧ ಅಮೆರಿಕ ದಾಳಿ ಕಾರ್ಯಾಚರಣೆಯ ವೀಡಿಯೊ ಪ್ರಸಾರ ಮಾಡಿದ ಡೊನಾಲ್ಡ್ ಟ್ರಂಪ್!

ಡೊನಾಲ್ಡ್ ಟ್ರಂಪ್ | PC : X
ವಾಶಿಂಗ್ಟನ್: ಯೆಮನ್ ನಲ್ಲಿ ಇರಾನ್ ಬೆಂಬಲಿತ ಹೌದಿ ಬಂಡುಕೋರರ ಮೇಲೆ ಅಮೆರಿಕದ ದಾಳಿ ಕಾರ್ಯಾಚರಣೆಯ ವೀಡಿಯೊವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬಿಡುಗಡೆಗೊಳಿಸಿದ್ದಾರೆ. ಮಿಲಿಟರಿ ಡ್ರೋನ್ ಅಥವಾ ಏರ್‌ಕ್ರಾಫ್ಟ್ ಮೂಲಕ ಈ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
ಅಮೆರಿಕದ ನೌಕೆಯ ಮೇಲೆ ದಾಳಿ ನಡೆಸಲು ಹೌದಿಗಳು ಜಮಾವಣೆಗೊಂಡಿದ್ದರು. ಆದರೆ ಇನ್ನು ಮುಂದೆ ಹೌದಿಗಳಿಂದ ಹೆಚ್ಚು ದಾಳಿಗಳು ನಡೆಯಲಾರದು. ನಮ್ಮ ಹಡಗುಗಳನ್ನು ಅವರು ಮುಳುಗಿಸಲಾರವು ಎಂದು ಟ್ರಂಪ್ ಎಕ್ಸ್ ನಲ್ಲಿ ಬರೆದಿದ್ದಾರೆ.
These Houthis gathered for instructions on an attack. Oops, there will be no attack by these Houthis!
— Donald J. Trump (@realDonaldTrump) April 4, 2025
They will never sink our ships again! pic.twitter.com/lEzfyDgWP5
ಈ ಮಧ್ಯೆ, ಹೌದಿಗಳ ವಿರುದ್ಧ ಕಾರ್ಯಾಚರಣೆಯ ಈ ವೀಡಿಯೊ ಬಗ್ಗೆ ವಿವಾದ ಭುಗಿಲೆದ್ದಿದೆ.ಅಮೆರಿಕವು ಈದುಲ್ ಫಿತರ್ ಸಂಭ್ರಮಾಚರಣೆಗಾಗಿ ಜಮಾವಣೆಗೊಂಡಿದ್ದ ನಾಗರಿಕರ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿದೆ ಎಂದು ಮಾಧ್ಯಮಗಳು ಆಪಾದಿಸಿವೆ. ಅಲ್ಲದೆ ನಾಗರಿಕರ ದಾಳಿ ನಡೆಸುವ ಮೂಲಕ ಇಸ್ರೇಲ್ ಯುದ್ಧಪರಾಧವನ್ನು ಎಸಗಿದೆಯೆಂದು ಅವು ಆರೋಪಿಸಿವೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕವು ಹೌದಿ ಬಂಡುಕೋರರ ಮೇಲಿನ ದಾಳಿಯನ್ನು ತೀವ್ರಗೊಳಿಸಿದೆ. ಕೆಂಪು ಸಮುದ್ರದಲ್ಲಿ ಅಮೆರಿಕದ ಹಡಗುಗಳ ಮೇಲೆ ಹುದಿ ಬಂಡುಕೋರರು ನಡೆಸುತ್ತಿರುವ ದಾಳಿಗಳಿಗೆ ಪ್ರತೀಕಾರವಾಗಿ ಈ ದಾಳಿಯನ್ನು ನಡೆಸಿರುವುದಾಗಿ ಅಮೆರಿಕ ಹೇಳಿಕೊಳ್ಳುತ್ತಿದೆ.
ಬುಧವಾರ ಹೌದಿ ಬಂಡುಕೋರರ ಮೇಲೆ ಅಮೆರಿಕ ನಡೆಸಿದ ವಾಯುದಾಳಿಗಳಲ್ಲಿ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದಾರೆ. ಇಸ್ರೇಲ್ ಹಾಗೂ ಹಮಾಸ್ ನಡುವೆ ಯುದ್ಧ ಆರಂಭವಾದಾಗಿನಿಂದ ಹೌದಿ ಹೋರಾಟಗಾರರು ಅಮೆರಿಕದ ಹಡಗಿನ ಮೇಲೆ ದಾಳಿಯನ್ನು ನಡೆಸುತ್ತಿವೆ.