ಇಸ್ರೇಲ್ ವಿರೋಧಿ ಚಟುವಟಿಕೆ ಆರೋಪ: ಇಬ್ಬರು ಬ್ರಿಟಿಷ್ ಸಂಸದರನ್ನು ವಶಕ್ಕೆ ಪಡೆದ ಇಸ್ರೇಲ್

ಯುವಾನ್ ಯಾಂಗ್ / ಅಬ್ತಿಸಾಮ್ ಮುಹಮ್ಮದ್ (Photo credit: indiatoday.in)
ಲಂಡನ್: ಇಸ್ರೇಲ್ ಇಬ್ಬರು ಬ್ರಿಟಿಷ್ ಸಂಸದರನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ ಮತ್ತು ಸಂಸದೀಯ ನಿಯೋಗದ ಭಾಗವಾಗಿರುವ ಅಧಿಕಾರಿಗಳಿಗೆ ತನ್ನ ದೇಶಕ್ಕೆ ಪ್ರವೇಶವನ್ನು ನಿರಾಕರಿಸಿದೆ ಎಂದು ಬ್ರಿಟನ್ ನ ವಿದೇಶಾಂಗ ಸಚಿವ ಡೇವಿಡ್ ಲ್ಯಾಮ್ಮಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಲೇಬರ್ ಪಾರ್ಟಿಯ ಸಂಸದರಾದ ಯುವಾನ್ ಯಾಂಗ್ ಮತ್ತು ಅಬ್ತಿಸಾಮ್ ಮುಹಮ್ಮದ್ ಅವರು ಭದ್ರತಾ ಪಡೆಗಳ ಚಟುವಟಿಕೆಗಳನ್ನು ದಾಖಲಿಸಿಕೊಳ್ಳಲು ಮತ್ತು ಇಸ್ರೆಲ್ ವಿರೋಧಿ ದ್ವೇಷವನ್ನು ಹರಡಲು ಯೋಜಿಸಿದ್ದರೆಂಬ ಶಂಕೆಯಿಂದ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಇಸ್ರೇಲ್ ವಲಸೆ ಸಚಿವಾಲಯದ ಹೇಳಿಕೆಯನ್ನು ಉಲ್ಲೇಖಿಸಿ ಸುದ್ದಿಸಂಸ್ಥೆಯು ವರದಿ ಮಾಡಿದೆ.
ಯಾಂಗ್ ಅವರು ಅರ್ಲಿ ಮತ್ತು ವುಡ್ಲಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರೆ ಮುಹಮ್ಮದ್ ಶೆಫೀಲ್ಡ್ ಸೆಂಟ್ರಲ್‌ನ ಸಂಸದರಾಗಿದ್ದಾರೆ. ಇಬ್ಬರೂ ಶನಿವಾರ ಇಸ್ರೇಲ್ ತಲುಪಿದ್ದರು.
‘ಇದು ಬ್ರಿಟಿಷ್ ಸಂಸದರನ್ನು ನಡೆಸಿಕೊಳ್ಳುವ ರೀತಿಯಲ್ಲ ಎಂದು ನಾನು ಇಸ್ರೇಲ್ ವಿದೇಶಾಂಗ ಸಚಿವರಿಗೆ ಸ್ಪಷ್ಟಪಡಿಸಿದ್ದೇನೆ ಮತ್ತು ನಾವು ಉಭಯ ಸಂಸದರನ್ನು ಸಂಪರ್ಕಿಸಿ ಎಲ್ಲ ಬೆಂಬಲವನ್ನು ಒದಗಿಸುವುದಾಗಿ ತಿಳಿಸಿದ್ದೇವೆ ’ ಎಂದು ತಿಳಿಸಿರುವ ಲ್ಯಾಮ್ಮಿ, ರಕ್ತಪಾತವನ್ನು ನಿಲ್ಲಿಸಲು, ಒತ್ತೆಯಾಳುಗಳ ವಿಮೋಚನೆಗೆ ಮತ್ತು ಗಾಝಾದಲ್ಲಿ ಸಂಘರ್ಷವನ್ನು ಅಂತ್ಯಗೊಳಿಸಲು ಕದನ ವಿರಾಮ ಮತ್ತು ಮಾತುಕತೆಗಳಿಗೆ ಮರಳುವುದನ್ನು ಖಚಿತಪಡಿಸುವುದರ ಮೇಲೆ ಬ್ರಿಟಿಷ್ ಸರಕಾರವು ಗಮನವನ್ನು ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ.