ಬಲೂಚ್ ಪ್ರತ್ಯೇಕತಾವಾದಿಗಳಿಂದ ಇರಾನ್ ನಲ್ಲಿ 8 ಪಾಕೀಸ್ತಾನೀಯರ ಹತ್ಯೆ
ಇಸ್ಲಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತದ ಗಡಿಗೆ ಹೊಂದಿಕೊಂಡಿರುವ ಇರಾನ್ ನ ಪ್ರದೇಶದಲ್ಲಿ ಪ್ರತ್ಯೇಕತಾವಾದಿಗಳು 8 ಪಾಕಿಸ್ತಾನಿ ನಾಗರಿಕರನ್ನು ಹತ್ಯೆ ಮಾಡಿರುವುದಾಗಿ ಪಾಕಿಸ್ತಾನ ಸರಕಾರ ಹೇಳಿದೆ.
ಮೃತಪಟ್ಟವರು ಪಾಕಿಸ್ತಾನದ ಪಂಜಾಬ್ ಪ್ರಾಂತದ ನಿವಾಸಿಗಳು. ಪಾಕಿಸ್ತಾನದ ಪ್ರತ್ಯೇಕತಾವಾದಿ ಗುಂಪು `ದಿ ಬಲೂಚ್ ನ್ಯಾಷನಲಿಸ್ಟ್ ಆರ್ಮಿ'(ಬಿಎನ್ಎ) ದಾಳಿಯ ಹೊಣೆ ವಹಿಸಿಕೊಂಡಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ `ದಿ ಅಸೋಸಿಯೇಟೆಡ್ ಪ್ರೆಸ್' ವರದಿ ಮಾಡಿದೆ. ಇತ್ತೀಚಿನ ದಿನಗಳಲ್ಲಿ ಬಲೂಚಿಸ್ತಾನ್ ಪ್ರಾಂತದ ಸಶಸ್ತ್ರ ಪ್ರತ್ಯೇಕತಾವಾದಿಗಳ ಗುಂಪು ಇತರ ಪ್ರಾಂತಗಳ, ಅದರಲ್ಲೂ ವಿಶೇಷವಾಗಿ ಪಂಜಾಬ್ ಪ್ರಾಂತದ ಕಾರ್ಮಿಕರನ್ನು ಗುರಿಯಾಗಿಸಿ ದಾಳಿಯನ್ನು ತೀವ್ರಗೊಳಿಸಿದೆ.
8 ಪಾಕಿಸ್ತಾನೀಯರ ಕ್ರೂರ ಹತ್ಯೆಯನ್ನು ಪಾಕಿಸ್ತಾನದ ಪ್ರಧಾನಿ ಶಹಬಾಝ್ ಷರೀಫ್ ಖಂಡಿಸಿದ್ದು `ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಿ, ಸೂಕ್ತ ಶಿಕ್ಷೆ ವಿಧಿಸುವಂತೆ ಹಾಗೂ ಈ ಕ್ರೂರ ಕೃತ್ಯದ ಹಿಂದಿರುವ ಕಾರಣಗಳನ್ನು ಬಹಿರಂಗಗೊಳಿಸಬೇಕೆಂದು' ಇರಾನ್ ಸರಕಾರವನ್ನು ಆಗ್ರಹಿಸಿದ್ದಾರೆ.
ಪಾಕಿಸ್ತಾನದಲ್ಲಿನ ಇರಾನ್ ರಾಯಭಾರಿ ಕಚೇರಿಯೂ ದಾಳಿಯನ್ನು ಖಂಡಿಸಿದ್ದು ಇಂತಹ ಭಯೋತ್ಪಾದಕ ಕೃತ್ಯ ಹಾಗೂ ಹಿಂಸಾಚಾರವನ್ನು ನಿಗ್ರಹಿಸಲು ಜಂಟಿ ಪ್ರಯತ್ನಗಳ ಅಗತ್ಯವಿದೆ ಎಂದು ಹೇಳಿದೆ.