ಟಿಬೆಟ್ ವಿಷಯಕ್ಕೆ ಸಂಬಂಧಿಸಿ ಅಮೆರಿಕದ ಸಿಬ್ಬಂದಿಗಳಿಗೆ ವೀಸಾ ನಿರ್ಬಂಧಿಸಿದ ಚೀನಾ
Photo Credit | PTI
ಬೀಜಿಂಗ್: ಟಿಬೆಟ್ ಸಂಬಂಧಿಸಿದ ವಿಷಯಗಳಲ್ಲಿ `ಕೆಟ್ಟದಾಗಿ ನಡೆದುಕೊಂಡಿರುವ' ಅಮೆರಿಕದ ಕೆಲವು ಸಿಬ್ಬಂದಿಗಳಿಗೆ ವೀಸಾ ನಿರ್ಬಂಧಿಸಿರುವುದಾಗಿ ಚೀನಾದ ವಿದೇಶಾಂಗ ಇಲಾಖೆ ಸೋಮವಾರ ಘೋಷಿಸಿದೆ.
ಟಿಬೆಟ್ ಪ್ರದೇಶಗಳಿಗೆ ವಿದೇಶೀಯರಿಗೆ ಪ್ರವೇಶಕ್ಕೆ ಸಂಬಂಧಿಸಿದ ನೀತಿಗಳಲ್ಲಿ ಒಳಗೊಂಡಿರುವ ಚೀನಾದ ಸಿಬ್ಬಂದಿಗಳ ಮೇಲೆ ಅಮೆರಿಕ ಹೆಚ್ಚುವರಿ ವೀಸಾ ನಿರ್ಬಂಧ ಜಾರಿಗೊಳಿಸಿದ ಬೆನ್ನಲ್ಲೇ ಚೀನಾ ಈ ಕ್ರಮ ಕೈಗೊಂಡಿದೆ. ಅಮೆರಿಕದ ರಾಜತಾಂತ್ರಿಕರು, ಪತ್ರಕರ್ತರು ಹಾಗೂ ಇತರ ಅಂತರಾಷ್ಟ್ರೀಯ ವೀಕ್ಷಕರು ಟಿಬೆಟ್ಗೆ ಪ್ರವೇಶಿಸುವುದನ್ನು ಚೀನಾದ ಕಮ್ಯುನಿಸ್ಟ್ ಪಾರ್ಟಿ ನಿರಾಕರಿಸಿದೆ ಎಂದು ಅಮೆರಿಕ ಆರೋಪಿಸಿದ್ದು ಅಮೆರಿಕ ರಾಜತಾಂತ್ರಿಕರು ಹಾಗೂ ಇತರರಿಗೆ ಅನಿರ್ಬಂಧಿತ ಪ್ರವೇಶ ಕಲ್ಪಿಸಲು ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ `ಟಿಬೆಟ್ ಸಂಬಂಧಿಸಿದ ವಿಷಯಗಳು ಚೀನಾದ ಆಂತರಿಕ ವ್ಯವಹಾರವಾಗಿದೆ. ಟಿಬೆಟ್ಗೆ ಸಂಬಂಧಿಸಿ ಚೀನಾದ ಸಿಬ್ಬಂದಿಗಳ ವಿರುದ್ಧ ಅಮೆರಿಕದ ವೀಸಾ ನಿರ್ಬಂಧಗಳು ಅಂತರಾಷ್ಟ್ರೀಯ ಕಾನೂನು ಮತ್ತು ಅಂತರಾಷ್ಟ್ರೀಯ ಸಂಬಂಧಗಳನ್ನು ನಿರ್ವಹಿಸುವ ಮೂಲ ನಿಯಮಗಳನ್ನು ಗಂಭೀರವಾಗಿ ಉಲ್ಲಂಘಿಸುತ್ತದೆ' ಎಂದು ಚೀನಾ ವಿದೇಶಾಂಗ ಇಲಾಖೆಯ ವಕ್ತಾರ ಲಿನ್ ಜಿಯಾನ್ ಹೇಳಿದ್ದಾರೆ.
ಟಿಬೆಟ್ ಎಲ್ಲರಿಗೂ ಮುಕ್ತವಾಗಿದೆ. ಇತರ ದೇಶಗಳ ಸ್ನೇಹಮಯಿ ಜನರು ಟಿಬೆಟ್ಗೆ ಭೇಟಿ ನೀಡಲು, ಪ್ರಯಾಣಿಸಲು ಮತ್ತು ವ್ಯವಹಾರ ನಡೆಸಲು ಚೀನಾ ಸ್ವಾಗತಿಸುತ್ತದೆ. ಆದರೆ ತಥಾಕಥಿತ ಮಾನವ ಹಕ್ಕುಗಳು, ಧರ್ಮ ಮತ್ತು ಸಂಸ್ಕøತಿಯ ನೆಪದಲ್ಲಿ ಟಿಬೆಟ್ ವ್ಯವಹಾರದಲ್ಲಿ ಯಾವುದೇ ದೇಶ ಅಥವಾ ವ್ಯಕ್ತಿಯ ಹಸ್ತಕ್ಷೇಪವನ್ನು ಚೀನಾ ವಿರೋಧಿಸುತ್ತದೆ ಎಂದವರು ಹೇಳಿದ್ದಾರೆ. ಮುಂಗಡ ಪರ್ಮಿಟ್ ಪಡೆದರೆ ಟಿಬೆಟ್ನ ಪಶ್ಚಿಮ ಪ್ರದೇಶಕ್ಕೆ ಭೇಟಿ ನೀಡಲು ವಿದೇಶದ ಪ್ರವಾಸಿಗರಿಗೆ ಅವಕಾಶ ನೀಡಲಾಗುತ್ತದೆ. ರಾಜತಾಂತ್ರಿಕರು ಹಾಗೂ ವಿದೇಶಿ ಪತ್ರಕರ್ತರು ಟಿಬೆಟ್ನ ಸ್ಥಳೀಯ ಆಡಳಿತದ ಅನುಮೋದನೆ ಪಡೆದರೆ ಮಾತ್ರ ಭೇಟಿ ನೀಡಬಹುದಾಗಿದೆ. ಚೀನಾವು 1950ರಲ್ಲಿ ಟಿಬೆಟ್ನ ನಿಯಂತ್ರಣವನ್ನು ಪಡೆದಿದ್ದು ಇದು ಊಳಿಗಮಾನ್ಯ ಜೀತಪದ್ಧತಿಯಿಂದ ಶಾಂತಿಯುತ ವಿಮೋಚನೆ ಎಂದು ಬಣ್ಣಿಸಿದೆ. ಆದರೆ ಟಿಬೆಟಿಯನ್ನರ ಪ್ರದೇಶದಲ್ಲಿ ಚೀನಾ ದಬ್ಬಾಳಿಕೆಯ ನಿಯಮ ಅನುಸರಿಸುತ್ತಿದೆ ಎಂದು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಗುಂಪುಗಳು ಹಾಗೂ ದೇಶಭ್ರಷ್ಟ ಟಿಬೆಟಿಯನ್ನರು ಖಂಡಿಸುತ್ತಿದ್ದಾರೆ.