130 ದಿನಗಳ ಬಳಿಕ ಮಹಿಳೆಯ ದೇಹದಿಂದ ಹಂದಿಯ ಕಿಡ್ನಿ ಹೊರತೆಗೆದ ವೈದ್ಯರು
Photo : X
ವಾಷಿಂಗ್ಟನ್: ಕಿಡ್ನಿ ವೈಫಲ್ಯಕ್ಕೆ ಒಳಗಾದ ಬಳಿಕ ಹಂದಿಯ ಕಿಡ್ನಿಯನ್ನು ಕಸಿ ಮಾಡಲಾಗಿದ್ದ ಅಮೆರಿಕದ ಮಹಿಳೆಯ ದೇಹವು ಕೃತಕ ಅಂಗವನ್ನು ತಿರಸ್ಕರಿಸಿದ ಕಾರಣ 130 ದಿನಗಳ ನಂತರ ಹಂದಿಯ ಕಿಡ್ನಿಯನ್ನು ಹೊರತೆಗೆಯಲಾಗಿದ್ದು ಮಹಿಳೆಗೆ ಡಯಾಲಿಸಿಸ್ ಪ್ರಕ್ರಿಯೆಯನ್ನು ಪುನರಾರಂಭಿಸಲಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಇದರಿಂದ ಪ್ರಾಣಿಗಳಿಂದ ಮನುಷ್ಯರಿಗೆ ಅಂಗಾಂಗ ಕಸಿಯ ಕುರಿತು ನಡೆಯುತ್ತಿರುವ ಸಂಶೋಧನೆಗೆ ಹಿನ್ನಡೆಯಾಗಿದೆ. ಅಲಬಾಮಾ ರಾಜ್ಯದ ಗಾಡ್ಸ್ಡೆನ್ ನಿವಾಸಿ ಟೊವಾನಾ ಲೂನಿ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು ಡಯಾಲಿಸಿಸ್ ಅಗತ್ಯವಾಗಿತ್ತು. ಕಳೆದ ವರ್ಷದ ನವೆಂಬರ್ 25ರಂದು ಲೂನಿಗೆ ಹಂದಿಯ ಮೂತ್ರಪಿಂಡವನ್ನು ಕಸಿ ಮಾಡಲಾಗಿದ್ದು 130 ದಿನ ಡಯಾಲಿಸಿಸ್ ಅಗತ್ಯವಿಲ್ಲದೆ ಆರಾಮವಾಗಿದ್ದರು. ಆದರೆ ಈ ತಿಂಗಳ ಆರಂಭದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು ಮಹಿಳೆಯ ದೇಹವು ಹಂದಿಯ ಕಿಡ್ನಿಯನ್ನು ತಿರಸ್ಕರಿಸಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಆದ್ದರಿಂದ ಎಪ್ರಿಲ್ 4ರಂದು ಹಂದಿಯ ಕಿಡ್ನಿಯನ್ನು ಹೊರತೆಗೆದಿದ್ದು ಮತ್ತೆ ಡಯಾಲಿಸಿಸ್ ಆರಂಭಿಸಲಾಗಿದೆ. ಟೊವಾನಾ ಲೂನಿ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯಕೀಯ ಮೂಲಗಳು ಹೇಳಿವೆ. 130 ದಿನ ಹಂದಿಯ ಕಿಡ್ನಿಯೊಂದಿಗೆ ಬದುಕಿದ್ದು ಹೊಸ ದಾಖಲೆಯಾಗಿದೆ. ಇದಕ್ಕೂ ಮುನ್ನ ಅಮೆರಿಕದಲ್ಲಿ ಇಬ್ಬರಿಗೆ ಹಂದಿಯ ಕಿಡ್ನಿ ಮತ್ತು ಇನ್ನಿಬ್ಬರಿಗೆ ಹಂದಿಯ ಹೃದಯವನ್ನು ಕಸಿ ಮಾಡಲಾಗಿದ್ದು ಈ ಎರಡೂ ಪ್ರಯೋಗಗಳೂ 2 ತಿಂಗಳೊಳಗೆ ವಿಫಲವಾಗಿದ್ದವು ಎಂದು ವರದಿಯಾಗಿದೆ.