ಅಮೆರಿಕ-ಇರಾನ್ ನಡುವೆ ಧನಾತ್ಮಕ, ರಚನಾತ್ಮಕ ಪರಮಾಣು ಮಾತುಕತೆ: ವರದಿ

Update: 2025-04-13 23:57 IST
  • whatsapp icon

ಮಸ್ಕತ್: ಇರಾನ್‍ ನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪರಮಾಣು ಕಾರ್ಯಕ್ರಮದ ಬಗ್ಗೆ ಅಮೆರಿಕ ಹಾಗೂ ಇರಾನ್ ನಡುವೆ ಉನ್ನತ ಮಟ್ಟದಲ್ಲಿ ಧನಾತ್ಮಕ ಮತ್ತು ರಚನಾತ್ಮಕ ಮಾತುಕತೆ ನಡೆದಿರುವುದಾಗಿ ಶ್ವೇತಭವನದ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.

ಶನಿವಾರ ನಡೆದ ಸಭೆಯಲ್ಲಿ ಅಮೆರಿಕ ಮತ್ತು ಇರಾನ್‍ನ ನಿಯೋಗಗಳು ಸಮಾಲೋಚನಾ ಚೌಕಟ್ಟಿಗೆ ಹತ್ತಿರವಾಗಿದ್ದು ಎಪ್ರಿಲ್ 19ರಂದು ಮತ್ತೆ ಒಮಾನ್‍ ನಲ್ಲಿ ಸಭೆ ಸೇರಲಿವೆ ಎಂದು ಇರಾನ್‍ ನ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಛಿ ಹೇಳಿದ್ದಾರೆ.

ಬೆಂಬಲ ನೀಡಿದ ಒಮಾನ್ ಆಡಳಿತಕ್ಕೆ ಧನ್ಯವಾದ ಅರ್ಪಿಸುವುದಾಗಿ ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹೇಳಿದ್ದು ಎರಡೂ ದೇಶಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಮಾತುಕತೆ ಹಾಗೂ ರಾಜತಾಂತ್ರಿಕತೆಯ ಮೂಲಕ ಪರಿಹರಿಸಿಕೊಳ್ಳಬೇಕೆಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದಾರೆ ಎಂದಿದ್ದಾರೆ.

ನೇರ ಮಾತುಕತೆಗೆ ಟ್ರಂಪ್ ಆಗ್ರಹದ ಹೊರತಾಗಿಯೂ ಇರಾನ್‍ನ ಆಶಯದಂತೆ ಪರೋಕ್ಷ ಮಾತುಕತೆ ನಡೆದಿದೆ. ಎರಡೂ ನಿಯೋಗಗಳು ಪ್ರತ್ಯೇಕ ಕೋಣೆಯಲ್ಲಿದ್ದು ಒಮಾನ್‍ ನ ವಿದೇಶಾಂಗ ಸಚಿವರ ಮೂಲಕ ಸಂದೇಶಗಳನ್ನು ರವಾನಿಸಲಾಗುತ್ತಿತ್ತು. ಸುಮಾರು ಎರಡೂವರೆ ಗಂಟೆಗಳ ಪರೋಕ್ಷ ಮಾತುಕತೆಯ ಬಳಿಕ ಎರಡೂ ನಿಯೋಗಗಳ ಮುಖ್ಯಸ್ಥರು ಒಮಾನ್ ವಿದೇಶಾಂಗ ಸಚಿವರ ಸಮ್ಮುಖದಲ್ಲಿ ಸಂಕ್ಷಿಪ್ತವಾಗಿ ಮಾತನಾಡಿದರು ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News