ಭಾರತದ ಗಡೀಪಾರು ಮನವಿ ಮೇರೆಗೆ ಮೆಹುಲ್ ಚೋಕ್ಸಿ ಬೆಲ್ಜಿಯಂನಲ್ಲಿ ಬಂಧನ

ಮೆಹುಲ್ ಚೋಕ್ಸಿ | PC : ANI
ಹೊಸದಿಲ್ಲಿ: ಸರಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ಬಿ)ಗೆ 13,850 ಕೋಟಿ ರೂ.ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ದೇಶಭ್ರಷ್ಟ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂನ ಕಾನೂನು ಜಾರಿ ಅಧಿಕಾರಿಗಳು ಶನಿವಾರ ಬಂಧಿಸಿದ್ದು, ಈ ಬಗ್ಗೆ ಭಾರತಕ್ಕೆ ಮಾಹಿತಿ ನೀಡಿದ್ದಾರೆ. ಸಿಬಿಐ ಮನವಿಯ ಮೇರೆಗೆ ಇಂಟರ್ ಪೋಲ್ ಚೋಕ್ಸಿ ಬಂಧನಕ್ಕಾಗಿ ತನ್ನ ಸದಸ್ಯ ರಾಷ್ಟ್ರಗಳಿಗೆ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಭಾರತವು ಬೆಲ್ಜಿಯಂ ಜೊತೆಗೆ ಹಸ್ತಾಂತರ ಒಪ್ಪಂದವನ್ನು ಹೊಂದಿದ್ದು,ಚೋಕ್ಸಿಯ ಹಸ್ತಾಂತರಕ್ಕಾಗಿ ಭಾರತವು ಆ ದೇಶದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಪ್ರಸ್ತುತ ಜೈಲಿನಲ್ಲಿರುವ ಚೋಕ್ಸಿ ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಜಾಮೀನು ಮತ್ತು ತಕ್ಷಣ ಬಿಡುಗಡೆಯನ್ನು ಕೋರಿ ಅರ್ಜಿಯನ್ನು ಸಲ್ಲಿಸುವ ನಿರೀಕ್ಷೆಯಿದೆ. ಚೋಕ್ಸಿಗೆ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅವರ ವಕೀಲರ ತಂಡವು ಸಿದ್ಧತೆಗಳನ್ನು ನಡೆಸುತ್ತಿದ್ದು, ಹಸ್ತಾಂತರವನ್ನು ವಿರೋಧಿಸುವುದಾಗಿ ತಿಳಿಸಿದೆ.
ಘಟನಾವಳಿಗಳ ವಿವರಗಳನ್ನು ನೀಡಿದ ಮೂಲಗಳು, ಬೆಲ್ಜಿಯಂನಲ್ಲಿ ಚೋಕ್ಸಿ ಉಪಸ್ಥಿತಿಯನ್ನು ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ ಬಳಿಕ ಶನಿವಾರ ಬಂಧಿಸಲಾಗಿದೆ. ಪ್ರಸ್ತುತ ಕಸ್ಟಡಿಯಲ್ಲಿರುವ ಅವರನ್ನು ಭಾರತಕ್ಕೆ ಹಸ್ತಾಂತರಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ತಿಳಿಸಿದವು.
ಚೋಕ್ಸಿ(65) ಜ.2, 2018ರಂದು ಭಾರತದಿಂದ ಪರಾರಿಯಾಗಿದ್ದು, ಪಿಎನ್‌ಬಿ ಗೆ 13,850 ಕೋಟಿ ರೂ.ವಂಚನೆ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ಈಡಿ)ಕ್ಕೆ ಬೇಕಾಗಿರುವ ವ್ಯಕ್ತಿಯಾಗಿದ್ದಾರೆ. ಚೋಕ್ಸಿಯ ಸೋದರಳಿಯ ನೀರವ್ ಮೋದಿ ಕೂಡ ಈ ವಂಚನೆಯಲ್ಲಿ ಪಾಲುದಾರನಾಗಿದ್ದರು.
ಭಾರತದಿಂದ ಅಮೆರಿಕಕ್ಕೆ ಪರಾರಿಯಾಗಿದ್ದ ಚೋಕ್ಸಿ ಬಳಿಕ ಆಂಟಿಗುವಾದಲ್ಲಿ ನೆಲೆಸಿದ್ದರು. ಭಾರತವನ್ನು ತೊರೆಯುವ ಮುನ್ನವೇ 2017ರಲ್ಲಿ ಆಂಟಿಗುವಾದ ಪೌರತ್ವವನ್ನು ಪಡೆದುಕೊಂಡಿದ್ದ ಅವರನ್ನು ಬಳಿಕ ಕ್ಯೂಬಾಕ್ಕೆ ಪಲಾಯನ ಮಾಡಲು ಪ್ರಯತ್ನಿಸಿದ್ದ ಆರೋಪದಲ್ಲಿ ಡೊಮಿನಿಕಾದಲ್ಲಿ ಬಂಧಿಸಲಾಗಿತ್ತು. ಚೋಕ್ಸಿಯನ್ನು ಆಂಟಿಗುವಾದಿಂದ ಅಪಹರಿಸಲಾಗಿತ್ತು ಎಂದು ಅವರ ವಕೀಲರು ಆಗ ಹೇಳಿಕೊಂಡಿದ್ದರು.
ಭಾರತವು ಚೋಕ್ಸಿ ಹಸ್ತಾಂತರಕ್ಕಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೂ ಡೊಮಿನಿಕಾ ಅವರನ್ನು ಆಂಟಿಗುವಾಕ್ಕೆ ಗಡಿಪಾರು ಮಾಡಿತ್ತು. ಬೆಲ್ಜಿಯಂನಲ್ಲಿ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯಲು ಅವರು ಡೊಮಿನಿಕಾ ತೊರೆದಿದ್ದರು ಎನ್ನಲಾಗಿದೆ.
ವಂಚನೆ ಪ್ರಕರಣದಲ್ಲಿ ಈಡಿ ಭಾರತದಲ್ಲಿ ಮತ್ತು ವಿದೇಶಗಳಲ್ಲಿಯ ಸ್ಥಿರಾಸ್ತಿಗಳು, ವಾಹನಗಳು, ಬ್ಯಾಂಕ್ ಖಾತೆಗಳು, ಒಂದು ಫ್ಯಾಕ್ಟರಿ, ಲಿಸ್ಟೆಡ್ ಕಂಪನಿಗಳ ಶೇರುಗಳು, ವಜ್ರಾಭರಣಗಳು ಸೇರಿದಂತೆ ಚೋಕ್ಸಿ ಮತ್ತು ಅವರ ಒಡೆತನದ ಗೀತಾಂಜಲಿ ಗ್ರೂಪ್ ನ ಒಟ್ಟು 2,565.90 ರೂ.ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿದ್ದು, ಮೂರು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ. ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯಕ್ಕೆ ಎರಡು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ.
ಮುಂಬೈನ ವಿಶೇಷ ನ್ಯಾಯಾಲಯವು ಚೋಕ್ಸಿ ವಿರುದ್ಧ 2018 ಮತ್ತು 2021ರಲ್ಲಿ ಎರಡು ಬಂಧನ ವಾರಂಟ್ಗಳನ್ನು ಹೊರಡಿಸಿದ್ದು,ಇವುಗಳನ್ನು ಬೆಲ್ಜಿಯಂ ಅಧಿಕಾರಿಗಳೊಂದಿಗೆ ಹಂಚಿಕೊಳ್ಳಲಾಗಿತ್ತು.
ಎರಡು ವಾರಗಳ ಹಿಂದೆ ಚೋಕ್ಸಿ ಮತ್ತು ಅವರ ಪತ್ನಿ ಬೆಲ್ಜಿಯಂನಲ್ಲಿ ಎಫ್ ರೆಸಿಡೆನ್ಸಿ ಕಾರ್ಡ್ ಪಡೆದುಕೊಂಡಿದ್ದರು. ಬೆಲ್ಜಿಯಂ ಪ್ರಜೆಯಾಗಿರುವ ಪ್ರೀತಿ ಮತ್ತು ಚೋಕ್ಸಿಯ ವಿಸ್ತೃತ ಕುಟುಂಬ ದೇಶದಲ್ಲಿ ಕುಟುಂಬ ಸಂಬಂಧಗಳನ್ನು ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
2024ರಲ್ಲಿ ದಂಪತಿ ಆಂಟಿಗುವಾದಿಂದ ಬೆಲ್ಜಿಯಂಗೆ ಸ್ಥಳಾಂತರಗೊಂಡಿದ್ದರು.
ನೀರವ್ ಮೋದಿಯನ್ನು ಮೇ 2019ರಲ್ಲಿ ಲಂಡನ್ ನಲ್ಲಿ ಬಂಧಿಸಲಾಗಿದ್ದು, ಹಸ್ತಾಂತರದಿಂದ ಪಾರಾಗಲು ಎಲ್ಲ ಕಾನೂನು ಮಾರ್ಗಗಳನ್ನು ಬಳಸಿಕೊಂಡಿರುವ ಅವರು ಪ್ರಸ್ತುತ ಅಲ್ಲಿಯ ಜೈಲಿನಲ್ಲಿದ್ದಾರೆ.
ಚೋಕ್ಸಿಯನ್ನು ತನಗೆ ಹಸ್ತಾಂತರಿಸುವಂತೆ ಕೋರಿ ಭಾರತವು ಮನವಿಯನ್ನು ಸಲ್ಲಿಸಿರುವುದನ್ನು ಬೆಲ್ಜಿಯಂ ಫೆಡರಲ್ ನ್ಯಾಯಾಂಗ ಸೇವೆಯು ಸೋಮವಾರ ದೃಢಪಡಿಸಿದೆ.
ಚೋಕ್ಸಿ ಬಂಧನ ದೊಡ್ಡ ಸಾಧನೆ: ಭಾರತ
ಚೋಕ್ಸಿ ಬಂಧನವನ್ನು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಸಿಕ್ಕಿದ ಯಶಸ್ಸು ಎಂದು ಸೋಮವಾರ ಬಣ್ಣಿಸಿದ ಕೇಂದ್ರ ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ಅವರು,ಇದು ಭಾರತಕ್ಕೆ ಹೆಮ್ಮೆಯ ಘಳಿಗೆಯಾಗಿದೆ ಎಂದು ಹೇಳಿದರು.
ಚೋಕ್ಸಿ ಬಂಧನ ಬಹುದೊಡ್ಡ ಸಾಧನೆಯಾಗಿದೆ ಎಂದು ಸಹಾಯಕ ವಿತ್ತಸಚಿವ ಪಂಕಜ ಚೌಧರಿ ಪ್ರತಿಕ್ರಿಯಿಸಿದರು.