ಭಾರತದ `ಆ್ಯಕ್ಟ್ ಈಸ್ಟ್' ನೀತಿಯಲ್ಲಿ ಥೈಲ್ಯಾಂಡ್ ಗೆ ವಿಶೇಷ ಸ್ಥಾನ: ಬ್ಯಾಂಕಾಕ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ
Photo - ANI
ಬ್ಯಾಂಕಾಕ್: ಭಾರತದ `ಆ್ಯಕ್ಟ್ ಈಸ್ಟ್' ನೀತಿಯಲ್ಲಿ ಥೈಲ್ಯಾಂಡ್ ವಿಶೇಷ ಸ್ಥಾನಮಾನವನ್ನು ಹೊಂದಿದೆ. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಕಾರ್ಯತಂತ್ರದ ಸಹಭಾಗಿತ್ವಕ್ಕೆ ಎತ್ತರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ.
ಥೈಲ್ಯಾಂಡ್ನಲ್ಲಿ ನಡೆಯಲಿರುವ 6ನೇ ಬಿಮ್ಸ್ಟೆಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ಯಾಂಕಾಕ್ಗೆ ಗುರುವಾರ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಥೈಲ್ಯಾಂಡ್ ಪ್ರಧಾನಿ ಪೆಟೊಂಗ್ಟಾರ್ನ್ ಶಿನಾವತ್ರ ಜತೆ ನಿಯೋಗ ಮಟ್ಟದ ಸಭೆ ನಡೆಸಿದರು. ಈ ಸಂದರ್ಭ ಅವರು ಭಾರತದ ವಿದೇಶಾಂಗ ನೀತಿಯಲ್ಲಿ ಥೈಲ್ಯಾಂಡ್ಗೆ ಇರುವ ವಿಶೇಷ ಸ್ಥಾನ, ಉಭಯ ದೇಶಗಳ ನಡುವೆ ಹಂಚಿಕೊಂಡಿರುವ ನಿಕಟ ಸಂಬಂಧಗಳನ್ನು ಉಲ್ಲೇಖಿಸಿದರು ಮತ್ತು ಥೈಲ್ಯಾಂಡ್ನಲ್ಲಿ ಭೀಕರ ಭೂಕಂಪದಿಂದ ಸಂಭವಿಸಿದ ಪ್ರಾಣಹಾನಿ, ನಾಶ-ನಷ್ಟದ ಬಗ್ಗೆ ಸಂತಾಪ ಸೂಚಿಸಿದರು.
ಸಭೆಯ ಬಳಿಕ ಮಾತನಾಡಿದ ಪ್ರಧಾನಿ ಮೋದಿ `ಭಾರತದ `ಆ್ಯಕ್ಟ್ ಈಸ್ಟ್' ನೀತಿ ಮತ್ತು ಇಂಡೊ-ಪೆಸಿಫಿಕ್ ನೀತಿಯಲ್ಲಿ ಥೈಲ್ಯಾಂಡ್ಗೆ ವಿಶೇಷ ಸ್ಥಾನವಿದೆ. ನಮ್ಮ ಭದ್ರತಾ ಏಜೆನ್ಸಿಗಳ ನಡುವೆ ಕಾರ್ಯತಂತ್ರದ ಸಂವಾದವನ್ನು ಸ್ಥಾಪಿಸಲು ನಾವು ಒಪ್ಪಿದ್ದೇವೆ. ಭಾರತ ಮತ್ತು ಥೈಲ್ಯಾಂಡ್ ಸ್ವತಂತ್ರ, ಮುಕ್ತ, ಅಂತರ್ಗತ, ನಿಯಮಾಧಾರಿತ ವ್ಯವಸ್ಥೆಯನ್ನು ಬೆಂಬಲಿಸುತ್ತವೆ. ನಾವು ಅಭಿವೃದ್ಧಿಪರ ನೀತಿಯಲ್ಲಿ ವಿಶ್ವಾಸ ಇರಿಸಿದ್ದೇವೆ, ವಿಸ್ತರಣಾವಾದ ನೀತಿಯಲ್ಲಿ ಅಲ್ಲ' ಎಂದರು.
ಭಾರತ ಮತ್ತು ಥೈಲ್ಯಾಂಡ್ನ ಶತಮಾನಗಳಷ್ಟು ಹಳೆಯದಾದ ಸಂಬಂಧಗಳು ನಮ್ಮ ಆಳವಾದ ಸಾಂಸ್ಕøತಿಕ ಮತ್ತು ಆಧ್ಯಾತ್ಮಿಕ ಸಂಬಂಧಗಳ ಮೂಲಕ ಸಂಪರ್ಕ ಹೊಂದಿದೆ. ಬೌದ್ಧ ಧರ್ಮದ ಹರಡುವಿಕೆಯು ನಮ್ಮ ಜನರನ್ನು ಸಂಪರ್ಕಿಸಿದೆ. ರಾಮಾಯಣದ ಕಥೆಗಳು ಥಾಯ್ ಜನರ ಜೀವನದ ಒಂದು ಭಾಗವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ರಾಮಾಯಣ ವಿಶೇಷ ಅಂಚೆಚೀಟಿ ಬಿಡುಗಡೆ
ಪ್ರಧಾನಿ ನರೇಂದ್ರ ಮೋದಿಯ ಭೇಟಿಯ ಸಂದರ್ಭದಲ್ಲಿ 18ನೇ ಶತಮಾನದ ರಾಮಾಯಣ ವರ್ಣಚಿತ್ರವನ್ನು ಒಳಗೊಂಡ ವಿಶೇಷ ಅಂಚೆಚೀಟಿಯನ್ನು ಥೈಲ್ಯಾಂಡ್ ಗುರುವಾರ ಬಿಡುಗಡೆಗೊಳಿಸಿದೆ. ಇದೇ ವೇಳೆ `ಟ್ರಿಪಿಟಕ'ದ ವಿಶೇಷ ಆವೃತ್ತಿಯನ್ನು ಪ್ರಧಾನಿ ಮೋದಿಗೆ ಥೈಲ್ಯಾಂಡ್ ಪ್ರಧಾನಿ ಶಿನವತ್ರ ಕೊಡುಗೆ ನೀಡಿದರು. ಟ್ರಿಪಿಟಿಕವು 108 ಸಂಪುಟಗಳನ್ನು ಒಳಗೊಂಡಿರುವ ಬುದ್ಧನ ಬೋಧನೆಗಳ ಸಂಕಲನವಾಗಿದೆ ಮತ್ತು ಇದನ್ನು ಪ್ರಧಾನ ಬೌದ್ಧ ಧರ್ಮಗ್ರಂಥವೆಂದು ಪರಿಗಣಿಸಲಾಗಿದೆ.