ಇಸ್ರೇಲ್ ಪ್ರಧಾನಿ ಭೇಟಿಯ ಬೆನ್ನಲ್ಲೇ ಐಸಿಸಿಯಿಂದ ಹಿಂದೆ ಸರಿಯಲು ಹಂಗರಿ ನಿರ್ಧಾರ
International Criminal Court
ಬುಡಾಪೆಸ್ಟ್: ಯುದ್ಧ ಅಪರಾಧಗಳು ಮತ್ತು ನರಮೇಧಕ್ಕಾಗಿ ವಿಶ್ವದ ಏಕೈಕ ಜಾಗತಿಕ ನ್ಯಾಯಮಂಡಳಿ `ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್(ಐಸಿಸಿ)ನಿಂದ ಹಿಂದೆ ಸರಿಯುವ ವಿಧಾನವನ್ನು ಪ್ರಾರಂಭಿಸುವುದಾಗಿ ಹಂಗರಿ ಗುರುವಾರ ಹೇಳಿದೆ.
ಐಸಿಸಿಯಿಂದ ಬಂಧನ ವಾರಂಟ್ ಎದುರಿಸುತ್ತಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಧಿಕೃತ ಭೇಟಿಗಾಗಿ ಹಂಗರಿಗೆ ಆಗಮಿಸಿದ ಬೆನ್ನಲ್ಲೇ ಹಂಗರಿ ಸರಕಾರ ಈ ನಿರ್ಧಾರ ಪ್ರಕಟಿಸಿದೆ. `ಹಂಗರಿ ಐಸಿಸಿಯಿಂದ ಹಿಂದೆ ಸರಿಯಲಿದೆ. ಸಾಂವಿಧಾನಿಕ ಮತ್ತು ಅಂತರಾಷ್ಟ್ರೀಯ ಕಾನೂನು ಚೌಕಟ್ಟಿಗೆ ಅನುಗುಣವಾಗಿ ಸರ್ಕಾರವು ಗುರುವಾರ ವಾಪಸಾತಿ ಕಾರ್ಯವಿಧಾನವನ್ನು ಪ್ರಾರಂಭಿಸುತ್ತದೆ' ಎಂದು ಹಂಗರಿ ಪ್ರಧಾನಿ ವಿಕ್ಟರ್ ಆರ್ಬನ್ ಅವರ ಕಚೇರಿಯ ಹೇಳಿಕೆ ತಿಳಿಸಿದೆ.
ಗಾಝಾ ಯುದ್ಧದಲ್ಲಿ ನೆತನ್ಯಾಹು ಮಾನವೀಯತೆಯ ವಿರುದ್ಧದ ಅಪರಾಧ ಎಸಗಿದ್ದಾರೆ ಎಂದು ದೂಷಿಸಿದ್ದ ಐಸಿಸಿ ನವೆಂಬರ್ನಲ್ಲಿ ಅವರ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿತ್ತು. ವಾರಂಟ್ ಜಾರಿಗೊಳಿಸಿದ ಮರುದಿನವೇ ಐಸಿಸಿ ಸದಸ್ಯ ದೇಶ ಹಂಗರಿಯ ಪ್ರಧಾನಿ ಆರ್ಬನ್, ಬಂಧನ ವಾರಾಂಟ್ `ಸಿನಿಕತನ, ಅತಿರೇಕದ ನಿರ್ಲಜ್ಜ ಕ್ರಮ' ಎಂದು ಟೀಕಿಸಿದ್ದರು ಹಾಗೂ ಹಂಗರಿಗೆ ಭೇಟಿ ನೀಡುವಂತೆ ಇಸ್ರೇಲ್ ಪ್ರಧಾನಿಯನ್ನು ಆಹ್ವಾನಿಸಿದ್ದರು.