ಮ್ಯಾನ್ಮಾರ್ ಭೂಕಂಪ: ಅವಶೇಷಗಳಡಿಯಲ್ಲಿ ಮತ್ತಷ್ಟು ಮೃತದೇಹಗಳು ಪತ್ತೆ; ಮೃತರ ಸಂಖ್ಯೆ 1664ಕ್ಕೆ ಏರಿಕೆ

Update: 2025-03-30 18:31 IST
ಮ್ಯಾನ್ಮಾರ್ ಭೂಕಂಪ: ಅವಶೇಷಗಳಡಿಯಲ್ಲಿ ಮತ್ತಷ್ಟು ಮೃತದೇಹಗಳು ಪತ್ತೆ; ಮೃತರ ಸಂಖ್ಯೆ 1664ಕ್ಕೆ ಏರಿಕೆ

Photo - AP

  • whatsapp icon

ಬ್ಯಾಂಕಾಕ್: ಶುಕ್ರವಾರ ಕೇಂದ್ರ ಮ್ಯಾನ್ಮಾರ್ ನಲ್ಲಿ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದಾಗಿ ಕುಸಿದು ಬಿದ್ದಿರುವ ಅವಶೇಷಗಳಡಿ ಸಿಲುಕಿಕೊಂಡಿರುವ ಮೃತದೇಹಗಳನ್ನು ಇನ್ನೂ ಹೊರ ತೆಗೆಯಲಾಗುತ್ತಿದ್ದು, ಇಲ್ಲಿಯವರೆಗೆ ಒಟ್ಟು 1664 ಮಂದಿ ಮೃತಪಟ್ಟಿದ್ದಾರೆ ಎಂದು ಶನಿವಾರ ಮ್ಯಾನ್ಮಾರ್ ನ ಸೇನಾ ಆಡಳಿತ ಸರಕಾರಿ ದೂರದರ್ಶನದ ಪ್ರಕಟಣೆಯಲ್ಲಿ ದೃಢಪಡಿಸಿದೆ.

ಮ್ಯಾನ್ಮಾರ್ ದೇಶದ ಎರಡನೆ ಅತಿ ದೊಡ್ಡ ನಗರವಾದ ಕೇಂದ್ರ ಮ್ಯಾನ್ಮಾರ್ ನ ಮ್ಯಾಂಡಲೆಯಲ್ಲಿ ಶುಕ್ರವಾರ ಸಂಭವಿಸಿದ ಭಾರಿ ಭೂಕಂಪದಲ್ಲಿ ಒಟ್ಟು 1,002 ಮಂದಿ ಮೃತಪಟ್ಟಿದ್ದಾರೆ ಎಂದು ಮೊದಲಿಗೆ ಪ್ರಕಟಿಸಲಾಗಿತ್ತು. ಆದರೆ, ಕೆಲವೇ ಗಂಟೆಗಳಲ್ಲಿ ಮೃತರ ಸಂಖ್ಯೆಯಲ್ಲಿ ತೀವ್ರ ಏರಿಕೆಯಾಗಿದ್ದು, ವ್ಯಾಪಕ ವಿಸ್ತಾರ ಹೊಂದಿರುವ ಈ ಪ್ರಾಂತ್ಯದಲ್ಲಿ ಸಂಭವಿಸಿರುವ ಸಾವು-ನೋವುಗಳನ್ನು ಅಂದಾಜಿಸುವುದು ಕ್ಲಿಷ್ಟಕರವಾಗಿ ಪರಿಣಮಿಸಿದೆ. ಹೀಗಾಗಿ, ಮೃತರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಶನಿವಾರದ ವೇಳೆಗೆ ಭೂಕಂಪದಲ್ಲಿ ಗಾಯಗೊಂಡವರ ಪ್ರಮಾಣ 3,408ಕ್ಕೆ ಏರಿಕೆಯಾಗಿದ್ದರೆ, ನಾಪತ್ತೆಯಾದವರ ಸಂಖ್ಯೆ 139ಕ್ಕೆ ಏರಿಕೆಯಾಗಿದೆ. ಭೂಕಂಪ ಪೀಡಿತ ಪ್ರಮುಖ ನಗರಗಳಲ್ಲಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದ್ದು, ವಿಶೇಷವಾಗಿ ದೇಶದ ಎರಡನೆ ದೊಡ್ಡ ನಗರವಾದ ಮ್ಯಾಂಡಲೆ ಹಾಗೂ ರಾಜಧಾನಿ ನೇಪ್ಯಿಟಾವ್ ನಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ವಿವಿಧ ದೇಶಗಳಿಂದ ರಕ್ಷಣಾ ತಂಡಗಳು ಹಾಗೂ ಸಾಧನಗಳನ್ನು ಮ್ಯಾನ್ಮಾರ್ ಗೆ ರವಾನಿಸಲಾಗಿದ್ದರೂ, ಈ ನಗರಗಳಲ್ಲಿನ ವಿಮಾನ ನಿಲ್ದಾಣಗಳು ಭೂಕಂಪದಿಂದ ಹಾನಿಗೀಡಾಗಿರುವುದರಿಂದ, ಈ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳನ್ನು ಲ್ಯಾಂಡಿಂಗ್ ಅಸಾಧ್ಯವಾಗಿ ಪರಿಣಮಿಸಿದೆ.

ಮ್ಯಾಂಡಲೆ ನಗರದ ಬಹುತೇಕ ಭಾಗಗಳಲ್ಲಿ ಈಗಲೂ ವಿದ್ಯುತ್, ದೂರವಾಣಿ ಹಾಗೂ ಅಂತರ್ಜಾಲ ಸೇವೆಗಳು ಕಡಿತಗೊಂಡಿವೆ. ಸರಕಾರಿ ನಾಗರಿಕ ಸೇವಾ ಸಿಬ್ಬಂದಿಗಳಿಗಾಗಿ ನಿರ್ಮಿಸಲಾಗಿದ್ದ ವಸತಿ ಸಮಚ್ಚಯದ ಹಲವು ಘಟಕಗಳು ಸೇರಿದಂತೆ ಹಲವಾರು ಕಟ್ಟಡಗಳು ಈ ಭೂಕಂಪದಲ್ಲಿ ನೆಲಸಮಗೊಂಡಿವೆ. ಆದರೆ, ಶನಿವಾರ ಈ ಭಾಗವನ್ನು ಅಧಿಕಾರಿಗಳು ಮುಚ್ಚಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News