ಅಮೆರಿಕ | ವೆನಿಝುವೆಲಾ ವಲಸಿಗರನ್ನು ಗಡೀಪಾರು ಮಾಡಲು ಕ್ರಿಮಿನಲ್ ಗ್ಯಾಂಗ್ ಗೆ ನಿಷ್ಠೆಯೇ ಮಾನದಂಡ: ನ್ಯಾಯಾಲಯದ ದಾಖಲೆಗಳಿಂದ ಬಹಿರಂಗ

PC | deccanherald
ವಾಶಿಂಗ್ಟನ್: ಹಿಂಸಾತ್ಮಕ ಬೀದಿ ಗುಂಪಿನ ಸದಸ್ಯರಾದ ವೆನಿಝುವೆಲಾ ವಲಸಿಗರನ್ನು ಕ್ರಿಮಿನಲ್ ಗುಂಪಿಗೆ ನಿಷ್ಠೆಯನ್ನು ಪ್ರದರ್ಶಿಸುವ ಬಟ್ಟೆಗಳು ಅಥವಾ ಅವರ ಮೈಮೇಲಿನ ಹಚ್ಚೆಗಳನ್ನು ಆಧರಿಸಿಯೇ, ಅಂಥವರನ್ನು ಒಟ್ಟಾಗಿ ಗಡೀಪಾರು ಮಾಡುವ ಅಧಿಕಾರವನ್ನು ಡೊನಾಲ್ಡ್ ಟ್ರಂಪ್ ಆಡಳಿತ ತನಗೆ ತಾನೇ ಮಂಜೂರು ಮಾಡಿಕೊಂಡಿರುವುದು ಇತ್ತೀಚಿನ ನ್ಯಾಯಾಲಯದ ದಾಖಲೆಗಳಿಂದ ಬಹಿರಂಗವಾಗಿದೆ.
‘ಟ್ರೆನ್ ಡಿ ಅರಾಗುವ’ ಗುಂಪಿಗೆ ಸೇರಿದವರು ಎಂದು ಅಧಿಕಾರಿಗಳು ವ್ಯಾಖ್ಯಾನಿಸಿರುವ ವಲಸಿಗರನ್ನು ಗಡೀಪಾರು ಮಾಡಲು ಡೊನಾಲ್ಡ್ ಟ್ರಂಪ್ ಆಡಳಿತವು ಕೆಳ ದರ್ಜೆಯ ಮಾನದಂಡವನ್ನು ನಿಗದಿಗೊಳಿಸಿರುವುದು ಈ ನ್ಯಾಯಾಲಯದ ದಾಖಲೆಗಳಿಂದ ಬೆಳಕಿಗೆ ಬಂದಿದೆ.
ಈ ತಿಂಗಳು ಅತ್ಯಂತ ಬಲಿಷ್ಠ ಯುದ್ಧಕಾಲದ ಶಾಸನವಾದ ಪರಕೀಯ ಶತ್ರುಗಳ ಕಾಯ್ದೆಯಡಿ ಈ ಬೀದಿ ಗುಂಪಿನ ಸದಸ್ಯರೆಂದು ಶಂಕಿಸಲಾದ 100ಕ್ಕೂ ಹೆಚ್ಚು ಶಂಕಿತರನ್ನು ಗಡೀಪಾರು ಮಾಡಲು ಶ್ವೇತ ಭವನ ಆದೇಶಿಸಿದೆ. ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆಯಲು ಇಂತಹ ಶಂಕಿತರಿಗೆ ಯಾವುದೇ ಸೂಕ್ತ ಕಾನೂನು ಪ್ರಕ್ರಿಯೆಯ ಅವಕಾಶ ನೀಡಲೂ ನಿರಾಕರಿಸಿದೆ.
ಶಂಕಿತ ವ್ಯಕ್ತಿಗಳು ‘ಟ್ರೆನ್ ಡಿ ಅರಾಗುವ’ ಗುಂಪಿನ ಸದಸ್ಯರು ಎಂದು ನಿರೂಪಿಸಲು ಆಡಳಿತಾತ್ಮಕ ಅಧಿಕಾರಿಗಳು ಅನುಸರಿಸಬೇಕಾದ ಸರಣಿ ಮಾನದಂಡಗಳನ್ನು ಒಳಗೊಂಡಿರುವ ಸರಕಾರಿ ದಾಖಲೆಯಾದ ‘ಪರಕೀಯ ಶತ್ರು ಮಾನ್ಯತಾ ಮಾರ್ಗಸೂಚಿ’ಯನ್ನು ಈ ವಾರಾಂತ್ಯದಲ್ಲಿ ವೆನಿಝುವೆಲಾ ವಲಸಿಗರ ಪರವಾಗಿ ಅವರ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದರು.
ಯಾವುದೇ ವಲಸಿಗ ನಿಜವಾಗಿಯೂ ‘ಟ್ರೆನ್ ಡಿ ಅರಾಗುವ’ ಗುಂಪಿನ ಸದಸ್ಯ ಎಂದು ನಿರ್ಧರಿಸಲು ಸ್ಥಾಪಿಸಲಾಗಿರುವ ಈ ಮಾನದಂಡ ವ್ಯವಸ್ಥೆಯು, ಯಾವುದೇ ವ್ಯಕ್ತಿಯನ್ನು ಈ ಗುಂಪಿನ ಸದಸ್ಯ ಎಂದು ಗುರುತಿಸಲು ಎಂಟು ಅಂಶಗಳನ್ನು ನಿರೂಪಿಸಬೇಕಾದ ಅಗತ್ಯವಿದೆ ಎಂದು ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಈ ದಾಖಲೆಯ ಪ್ರಕಾರ, ಯಾರಾದರೂ ವಲಸಿಗ ತಾನು ‘ಟ್ರೆನ್ ಡಿ ಅರಾಗುವ’ ಗುಂಪಿನ ಸದಸ್ಯ ಎಂದು ಸ್ವಯಂ ಒಪ್ಪಿಕೊಂಡರೆ, ಅಂತಹ ವಲಸಿಗನು ಪರಕೀಯ ಶತ್ರು ಕಾಯ್ದೆಯಡಿ ಸ್ವಯಂಚಾಲಿತವಾಗಿ ತಕ್ಷಣವೇ ಗಡೀಪಾರಿಗೆ ಗುರಿಯಾಗುತ್ತಾನೆ.
ಆದರೆ, ಯಾವುದಾದರೂ ವಲಸಿಗ ‘ಟ್ರೆಡ್ ಡಿ ಅರಾಗುವ’ ಗುಂಪಿನ ಸದಸ್ಯತ್ವವನ್ನು ಸೂಚಿಸುವ ಅಥವಾ ನಿಷ್ಠೆ ವ್ಯಕ್ತಪಡಿಸುವ ಹಚ್ಚೆಯನ್ನು ತನ್ನ ದೇಹದ ಮೇಲೆ ಹೊಂದಿದ್ದರೆ, ಅಂತಹ ವ್ಯಕ್ತಿ ‘ಟ್ರೆಡ್ ಡಿ ಅರಾಗುವ’ ಗುಂಪಿನ ಸದಸ್ಯ ಎಂದು ನಿರ್ಧರಿಸಲು ಅಧಿಕಾರಿಗಳಿಗೆ ನಾಲ್ಕು ಅಂಕಗಳನ್ನು ಹಂಚಿಕೆ ಮಾಡಲಾಗಿದೆ. ಒಂದು ವೇಳೆ ಶಂಕಿತ ವ್ಯಕ್ತಿಯು ‘ಟ್ರೆಡ್ ಡಿ ಅರಾಗುವ’ ಗುಂಪಿಗೆ ನಿಷ್ಠೆ ಹೊಂದಿರುವುದನ್ನು ಸೂಚಿಸುವ ಚಿಹ್ನೆ, ಲಾಂಛನ, ಸಂಕೇತ, ಚಿತ್ರಕಲೆ ಅಥವಾ ವಸ್ತ್ರವನ್ನು ಪ್ರದರ್ಶಿಸಿದ್ದರೆ, ಅಂತಹ ವ್ಯಕ್ತಿ ‘ಟ್ರೆಡ್ ಡಿ ಅರಾಗುವ’ ಗುಂಪಿನ ಸದಸ್ಯ ಎಂದು ನಿರ್ಧರಿಸಲು ಕಾನೂನು ಜಾರಿ ಪ್ರಾಧಿಕಾರಗಳಿಗೆ ಉಳಿದ ನಾಲ್ಕು ಅಂಕಗಳನ್ನು ಹಂಚಿಕೆ ಮಾಡಲಾಗಿದೆ.
ಇದಕ್ಕಿಂತ ಹೆಚ್ಚಿನದಾಗಿ, ಉತ್ಕೃಷ್ಟ ಗುಣಮಟ್ಟದ ವಸ್ತ್ರ ಧರಿಸಿರುವ, ವಿಶೇಷವಾಗಿ ಚಿಕಾಗೊ ಬುಲ್ಸ್ ನ ಬ್ಯಾಸ್ಕೆಟ್ ಬಾಲ್ ಜೆರ್ಸಿ ಅಥವಾ ಅದರ ಮಾಜಿ ತಾರಾ ಆಟಗಾರ ಮೈಕೇಲ್ ಜೋರ್ಡಾನ್ ರ ಭಾವಚಿತ್ರ ಹೊಂದಿರುವ ದಿರಿಸು ಧರಿಸಿರುವ ಕಾರಣಕ್ಕೇ ಶಂಕಿತ ವ್ಯಕ್ತಿಗಳನ್ನು ‘ಟ್ರೆಡ್ ಡಿ ಅರಾಗುವ’ ಗುಂಪಿನ ಸದಸ್ಯರು ಎಂದು ಅಧಿಕಾರಿಗಳು ಗುರುತಿಸಬಹುದಾಗಿದೆ ಎಂಬ ಸಂಗತಿ ಈ ದಾಖಲೆಗಳಿಂದ ತಿಳಿದು ಬಂದಿದೆ.
ಹಚ್ಚೆ ಹೊಂದಿರುವ ಕಾರಣಕ್ಕೇ ‘ಟ್ರೆಡ್ ಡಿ ಅರಾಗುವ’ ಗುಂಪಿಗೆ ಸೇರಿದ್ದಾರೆ ಎಂದು ಹಲವಾರು ವ್ಯಕ್ತಿಗಳನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ ಹಾಗೂ ಕುಖ್ಯಾತ ಎಲ್ ಸಾಲ್ವಡಾರ್ ಬಂದೀಖಾನೆಗೆ ರವಾನಿಸಲಾಗಿದೆ ಎಂದು ವೆನಿಝುವೆಲಾ ವಲಸಿಗರ ಪರ ವಕೀಲರು ಪದೇ ಪದೇ ವಾದಿಸಿದರು.
ಇದೇ ವೇಳೆ, ಈ ಪ್ರಕರಣದಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು ಅಮೆರಿಕ ಗೋಪ್ಯತಾ ಕಾಯ್ದೆಯನ್ನು ಅನ್ವಯಿಸಿರುವುದು ಸಂಪೂರ್ಣ ತಪ್ಪು ಮತ್ತು ತೀವ್ರ ಹಾನಿಕಾರಕವಾಗಿದೆ ಎಂದೂ ಅವರು ವಾದಿಸಿದರು.
“ಒಂದು ವೇಳೆ ಸರಕಾರದ ಕಾರಣವನ್ನು ಹೆಚ್ಚು ಉದಾರ ನೆಲೆಯಲ್ಲಿ ಅಂಗೀಕರಿಸಿದರೆ, ಅದರಿಂದ ನ್ಯಾಯಾಂಗ ನಿಂದನೆ ತನಿಖೆಗೆ ಹಿನ್ನಡೆಯಾಗಲಿದೆ. ಯಾವಾಗಲೆಲ್ಲ ಸರಕಾರವು ಜಾಲವೊಂದನ್ನು ವಿದೇಶಾಂಗ ವ್ಯವಹಾರಗಳು ಅಥವಾ ರಾಷ್ಟ್ರೀಯ ಭದ್ರತೆಗೆ ಸಂಬಂಧ ಕಲ್ಪಿಸುತ್ತದೆಯೊ, ಆಗೆಲ್ಲ ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸುವ ನಿರಂಕುಶಾಧಿಕಾರವನ್ನು ಅಧಿಕಾರಿಗಳಿಗೆ ನೀಡಿದಂತಾಗುತ್ತದೆ” ಎಂದೂ ಅವರು ಒತ್ತಿ ಹೇಳಿದರು.